ಐಗೂರು, ೧೯: ಯಡವನಾಡು ಮೀಸಲು ಅರಣ್ಯ ಪ್ರದೇಶವು ಅಂದಾಜು ೬,೦೦೦ ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಹೊಂದಿದ್ದು ಐಗೂರು, ಕಾಜೂರು, ಎಡವಾರೆ, ಹಾರಂಗಿ, ಮದಲಾಪುರ, ಯಡವನಾಡು, ಹುದುಗೂರು, ನೇರ್ಗಳ್ಳಿ-ಕರ್ಕಳ್ಳಿ, ಅರೆಯೂರು, ಕುಸುಬೂರು, ಬೇಳೂರು, ಬಸವನಹಳ್ಳಿ, ಕಾರೆಕೊಪ್ಪ ಮತ್ತು ಎಲಕನೂರು ಹೊಸಳ್ಳಿ ಗ್ರಾಮಗಳನ್ನು ಒಳಗೊಂಡಿದೆ .

ಈ ಹಿಂದೆ ಆನೆಗಳ ದಾಳಿಯನ್ನು ತಪ್ಪಿಸಲು ಈ ಭಾಗದಲ್ಲಿ ಸೋಲಾರ್ ಬೇಲಿಗಳನ್ನು ನಿರ್ಮಿಸಿದ್ದು ಅವುಗಳು ಕಾರ್ಯನಿರ್ವಹಿಸದೆ ಮೂಲೆ ಗುಂಪಾಗಿವೆ. ಆನೆಗಳು ಗ್ರಾಮಗಳಿಗೆ ದಾಳಿ ಇಡುವುದನ್ನು ತಪ್ಪಿಸಲು ಅರಣ್ಯದ ಸುತ್ತಲೂ ಇಲಾಖಾ ವತಿಯಿಂದ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ ಯಾದರೂ ಇಲ್ಲಿ ಆನೆಗಳಿಗೆ ಅರಣ್ಯದಿಂದ ಹೊರಕ್ಕೆ ಹೋಗಿ ನೀರನ್ನು ಕುಡಿದು ಪುನಃ ಅರಣ್ಯದೊಳಕ್ಕೆ ಬರಲು ನಾಲ್ಕು ದಾರಿಗಳನ್ನು ಬಿಟ್ಟಿದ್ದು ,ಈ ದಾರಿಗಳಿಗೆ ಗೇಟನ್ನು ಅಳವಡಿಸದೆ ಬ್ಯಾರಿಕೇಡ್ ಅಳವಡಿಕೆಯೇ ವ್ಯರ್ಥ ಹಾಗೂ ಹಾಸ್ಯಾಸ್ಪದ ಎಂಬAತಾಗಿದೆ. ಈ ದಾರಿಗಳ ಮುಖಾಂತರವೇ ಗ್ರಾಮಗಳಿಗೆ ಆನೆಗಳು ಲಗ್ಗೆ ಇಡುತ್ತಿವೆ. ಮೊದಲನೆಯ ದಾರಿಯು ಅರಣ್ಯ ಇಲಾಖೆಯ ವಸತಿಗೃಹದ ಮುಂಭಾಗದ ರಸ್ತೆಯ ಬದಿಯಲ್ಲಿದ್ದು, ಎರಡನೇ ದಾರಿಯು ಕಾಜೂರಿನ ಮುಕ್ಕಾಟಿ ಭಾಗದಲ್ಲಿದ್ದು, ಮೂರನೇ ದಾರಿಯು ಎಡವಾರೆ ಮಚ್ಚಂಡ ಅಶೋಕ ಮತ್ತು ಕೃಷ್ಣಪ್ಪ ಅವರ ತೋಟದ ಬಳಿಯಿದ್ದು, ನಾಲ್ಕನೇ ದಾರಿಯು ಸಜ್ಜಳ್ಳಿ ಹಾಡಿಯ ಬಳಿಯಿದ್ದು, ಈ ದಾರಿಗಳಿಗೆ ಬಲವಾದ ಗೇಟ್‌ಅನ್ನು ಅಳವಡಿಸದೇ ಇರುವುದು ಆನೆಗಳು ಗ್ರಾಮಗಳಿಗೆ ಮತ್ತು ಹೆದ್ದಾರಿ ರಸ್ತೆಗೆ ಲಗ್ಗೆ ಇಡಲು ಕಾರಣವಾಗಿದೆ. ಕೋವರ್‌ಕೊಲ್ಲಿ ರಸ್ತೆಯಿಂದ ಐಗೂರಿನ ತನಕ ವಾಹನ ಸವಾರರು ಹಗಲು-ರಾತ್ರಿ ಜೀವವನ್ನು ಪಣಕ್ಕಿಟ್ಟು ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಅರಣ್ಯದೊಳಗೆ ಇರುವ ಕೆರೆಗಳು ಮಣ್ಣುಗಳಿಂದ ಮುಚ್ಚಿ ಹೋಗಿದ್ದು, ಬಿದುರು ಸೊಪ್ಪುಗಳು ಹಾಗೂ ಹಲಸಿನ ಹಣ್ಣುಗಳ ಮರಗಳು ಕಡಿಮೆಯಾಗಿದ್ದು ,ಆಹಾರವನ್ನು ಅರಸಿಕೊಂಡು ಆನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಆನೆಗಳಿಗೆ ನೀರು ಹಾಗೂ ಆಹಾರ ಮರೀಚಿಕೆಯಾಗಿದೆ. ಐಗೂರು ವ್ಯಾಪ್ತಿಯ ಅರಣ್ಯ ವ್ಯಾಪ್ತಿಯಲ್ಲಿ ಆಹಾರದ ಕೊರತೆ ಕಂಡು ಬಂದಾಗ ಆನೆಗಳು ಜೋಳ, ರಾಗಿ, ಕೇನೆ ಬೆಳೆಯುವ ಗ್ರಾಮಗಳ ಭಾಗವಾದ ಬಾಣಾವರ, ಚಿನ್ನೆನಹಳ್ಳಿ, ಹೆಬ್ಬಾಲೆ, ಅರಸಿನಗುಪ್ಪೆ ಭಾಗಗಳಿಗೆ ಎಡವನಾಡು ಮೀಸಲು ಅರಣ್ಯದಿಂದ ಲಗ್ಗೆ ಇಡುತ್ತವೆ. ಆನೆ ಮತ್ತು ಮಾನವ ಸಂಘರ್ಷದಿAದ ಬೇಸತ್ತು ಆನೆ ಹೋರಾಟ ಸಮಿತಿಯವರು ಮತ್ತು ರೈತ ಸಂಘಗಳ ಮುಖಂಡರು ಹಲವಾರು ಬಾರಿ ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು ಅಸಾಧ್ಯವೆಂಬAತಾ ಗಿದೆ. ರೈಲ್ವೇ ಬ್ಯಾರಿಕೇಡ್‌ಗೆ ಅಂಟಿಕೊAಡಿರುವ ನಾಲ್ಕು ಮುಖ್ಯ ದ್ವಾರಗಳಿಗೆ ಗೇಟ್ ಅಳವಡಿಸಿ ರೈತರಿಗಾಗುವ ಬೆಳೆ ನಷ್ಟವನ್ನು ತಡೆಯುವಂತೆ ಐಗೂರು ಗ್ರಾಮ ಪಂಚಾಯಿತಿಯ ಸದಸ್ಯರುಗಳಾದ ಭಾರನ ಪ್ರಮೋದ್ ಮತ್ತು ಲಿಂಗೇರಿ ರಾಜೇಶ್ ಅವರುಗಳು ಒತ್ತಾಯಿಸಿದ್ದಾರೆ.

- ಸುಕುಮಾರ.