ಸೋಮವಾರಪೇಟೆ, ಫೆ. ೧೯: ಪಟ್ಟಣದ ಶ್ರೀಮುತ್ತಪ್ಪ ಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ರೂ. ೪೨.೫೦ ಲಕ್ಷ ವೆಚ್ಚದಲ್ಲಿ ರಾಜಗೋಪುರ ನಿರ್ಮಿಸಲು ನೀಲಿ ನಕಾಶೆ ಸಿದ್ಧಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ತಿಳಿಸಿದ್ದಾರೆ.

ಕಾಮಗಾರಿಗೆ ಮಾ. ೧೭ರಂದು ಆರಂಭವಾಗಲಿರುವ ಪ್ರಸಕ್ತ ಸಾಲಿನ ಜಾತ್ರಾಮಹೋತ್ಸವದಲ್ಲಿ ಶಾಸಕ ಮಂಥರ್‌ಗೌಡ ಅವರು ಚಾಲನೆ ನೀಡಲಿದ್ದಾರೆ. ಕಳೆದ ಸಾಲಿನಲ್ಲಿ ಸಂಸದರು, ಶಾಸಕರು ಮತ್ತು ದಾನಿಗಳ ಸಹಕಾರದಿಂದ ಅನ್ನದಾನ ಮಂಟಪವನ್ನು ಲೋಕಾರ್ಪಣೆ ಮಾಡಲಾಗಿದೆ. ದೇವಾಲಯದ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ನಡೆಸಿದ ಬ್ರಹ್ಮ ಕಲಶೋತ್ಸವದ ನೆನಪಿಗಾಗಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಾಜಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ದೇವಾಲಯದಲ್ಲಿ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಮುಂಭಾಗ ರಾಜಗೋಪುರ ಮತ್ತು ಅಯ್ಯಪ್ಪಸ್ವಾಮಿ ದೇವಾಲಯದ ಗರ್ಭಗುಡಿಗೆ ಕಂಚಿನ ಹೊದಿಕೆ ಮತ್ತು ಹದಿನೆಂಟು ಮೆಟ್ಟಿಲಿಗೆ ಕೂಡ ಕಂಚಿನ ಹೊದಿಕೆ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಜಾತ್ರೋತ್ಸವವು ಮಾರ್ಚ್ ೧೭ ರಿಂದ ೧೯ರವರೆಗೆ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ತಾ. ೧೭ರಂದು ಬೆಳಿಗ್ಗೆ ೫.೩೦ರಿಂದ ಗಣಪತಿ ಹೋಮ, ಸಂಜೆ ೬.೩೦ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ಆಶ್ಲೇಷ ಪೂಜೆ ನಡೆಯಲಿದೆ. ೧೮ ರಂದು ಉತ್ಸವ ಕಾರ್ಯಕ್ರಮಗಳು ಆರಂಭವಾಗಲಿವೆ. ಅಂದು ಸಂಜೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಲಿದೆ. ನಂತರ ವೆಳ್ಳಾಟಂ ಮತ್ತು ೧೯ರಂದು ಬೆಳಗ್ಗಿನ ಜಾವದಿಂದ ಕೋಲಗಳು ನಡೆಯಲಿವೆ ಎಂದು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ತಿಳಿಸಿದ್ದಾರೆ.