ಕೂಡಿಗೆ, ಫೆ. ೧೯: ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾದ ಭತ್ತದ ಬೆಳೆಯು ಬಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಮಟ್ಟಿಗೆ ಉತ್ತಮ ಬೆಲೆಯು ದೊರಕುತ್ತಿರುವ ಹಿನ್ನೆಲೆಯಲ್ಲಿ ರೈತರಲ್ಲಿ ಸಂತಸ ತಂದಿದೆ. ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ಈ ಸಾಲಿನಲ್ಲಿ ಕೃಷಿ ಇಲಾಖೆ ನಿಯಮಾನುಸಾರ ಮತ್ತು ಪರಿಷ್ಕೃತಗೊಂಡ ಬೀಜದ ಭತ್ತವನ್ನು ನಾಟಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚು ಇಳುವರಿ ಬಂದಿದೆ. ಇದರಿಂದಾಗಿ ಭತ್ತ ಬೆಳೆದ ರೈತರಿಗೆ ಸ್ವಲ್ಪ ಮಟ್ಟಿಗೆ ಸಂತಸ ತಂದಿದೆ.

ಈ ಸಾಲಿನಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿ ಬರದ ಛಾಯೆಯ ನಡುವೆಯೂ ನಿಯಂತ್ರಣದಿAದ ನೀರು ಬಳಕೆಯನ್ನು ಮಾಡಿಕೊಂಡು ಶ್ರಮವಹಿಸಿ ಭತ್ತ ಬೆಳೆದಿರುತ್ತಾರೆ. ಮನೆಗಳಲ್ಲಿ ದಿನನಿತ್ಯದ ಆಹಾರ ಬಳಕೆಗೆ ಅಕ್ಕಿ ಹಾಗೂ ಹೈನುಗಾರಿಕೆಗೆ ಹುಲ್ಲು ಪ್ರಮುಖವಾಗಿ ಬೇಕಾಗುವ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯ ನಡುವೆ ಭತ್ತದ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗಿದೆ.

ಕಳೆದ ಬಾರಿ ಇದೇ ಸಮಯದಲ್ಲಿ ಒಂದು ಕ್ವಿಂಟಾಲ್ ಭತ್ತದ ಬೆಲೆ ಕೇವಲ ರೂ. ೨,೦೦೦ ದಿಂದ ೨,೫೦೦ ರೂ. ಗಳಷ್ಟು ಮಾತ್ರ ಇತ್ತು. ಈ ಸಾಲಿನಲ್ಲಿ ಅಕ್ಕಿ ಬೆಳೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಲೆಯು ೪,೦೦೦ ದಿಂದ ೫,೦೦೦ದಷ್ಟಿದೆ. ಈಗಾಗಲೇ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಭತ್ತದ ವ್ಯಾಪಾರಿಗಳು ಭತ್ತ ಖರೀದಿಯಲ್ಲಿ ತೊಡಗಿದ್ದಾರೆ.

ಅಕ್ಕಿ ಬೆಲೆ ಬಾರಿ ದುಬಾರಿ: ಭತ್ತದ ಬೆಳೆಗೆ ಉತ್ತಮವಾದ ಬೆಲೆ ದೊರಕಿರುವ ಹಿನ್ನೆಲೆಯಲ್ಲಿ ಭತ್ತಕ್ಕೆ ಬೇಡಿಕೆಯಾಗುತ್ತಿದಂತೆ ಅಕ್ಕಿ ಬೆಲೆ ದುಬಾರಿಯಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ತಿಂಗಳಲ್ಲಿ ೨೫ ಕೆ.ಜಿ. ಬ್ಯಾಗ್ ಅಕ್ಕಿಗೆ ರೂ. ೮೦೦ ಇದ್ದ ಬೆಲೆ ಇದೀಗ ೧,೬೦೦ ಕ್ಕೆ ಏರಿ ದುಪ್ಪಟ್ಟು ಆಗಿದೆ. ರಾಜಮುಡಿ, ರಾಜಭೋಗ ಎಂಬ ಸಣ್ಣ ಅಕ್ಕಿಗೆ ಒಂದು ಕೆ.ಜಿ ಗೆ ಮೊದಲು ರೂ.೫೦ ಇದ್ದು ಇದೀಗ ರೂ.೮೦ ಕ್ಕೆ ಏರಿಕೆಯಾಗಿದೆ. -ಕೆ.ಕೆ ನಾಗರಾಜಶೆಟ್ಟಿ.