*ಗೋಣಿಕೊಪ್ಪ, ಫೆ. ೨೦: ಬಾಳೆಲೆ ವಿಜಯಲಕ್ಷಿö್ಮ ಮೈದಾನದಲ್ಲಿ ಕೊಡವ ಕೌಟುಂಬಿಕ ಅರಮಣ ಮಾಡ ಕ್ರಿಕೆಟ್ ನಮ್ಮೆ ಏಪ್ರಿಲ್ ೨೧ ರಿಂದ ಮೇ ೧೯ ರವರೆಗೆ ನಡೆಯ ಲಿದೆ ಎಂದು ಅರಮಣಮಾಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಅರಮಣಮಾಡ ಎ. ಕೆ. ಸುರೇಶ್ ತಿಳಿಸಿದರು.

೨೨ ನೇ ವರ್ಷದ ಕೌಟುಂಬಿಕ ಕ್ರಿಕೆಟ್ ನಮ್ಮೆ ಆಚರಿಸಲು ಕುಟುಂಬ ಸಜ್ಜಾಗಿದೆ. ಈಗಾಗಲೇ ಎಲ್ಲ ಸಿದ್ದತೆಗಳು ಆರಂಭಗೊAಡಿದ್ದು, ಲಾಂಛನ ಅನಾವರಣದ ಮೂಲಕ ಚಾಲನೆ ನೀಡಲಾಗಿದ್ದು, ೨೫೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು ರೂ. ೨.೫ ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಲಾಗಿದ್ದು, ವಿಜೇತ ತಂಡಕ್ಕೆ ರೂ.೧ ಲಕ್ಷ, ದ್ವಿತೀಯ ತಂಡಕ್ಕೆ ರೂ.೭೫ ಸಾವಿರ, ೩ ನೇ ತಂಡಕ್ಕೆ ರೂ. ೫೦ ಸಾವಿರ, ೪ ನೇ ತಂಡಕ್ಕೆ ರೂ. ೨೫ ಸಾವಿರ ನಗದು ಬಹುಮಾನ ನೀಡಲಾಗುವುದು. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಕುಟುಂಬದ ಹೆಸರಿನಲ್ಲಿ ಪ್ರತ್ಯೇಕವಾಗಿ ಆಡಲು ಅವಕಾಶ ನೀಡಲಾಗುತ್ತಿದೆ. ಕೌಟುಂಬಿಕ ಮಹಿಳೆಯರ ಟೂರ್ನಿಯಲ್ಲಿ ಗರಿಷ್ಠ ೩೨ ತಂಡಗಳು ಮಾತ್ರ ಪಾಲ್ಗೊಳ್ಳಲಿದೆ. ಮಹಿಳೆಯರಿಗೂ ೪ ವಿಭಾಗದಲ್ಲಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ೨೦೦೦ ನೇ ಇಸವಿಯಲ್ಲಿ ಕೊಡವ ಕೌಟುಂಬಿಕ ಕ್ರಿಕೆಟ್ ಆರಂಭಿಸಲಾಯಿತು. ಮಕ್ಕಳಿಗೆ ಹೆಚ್ಚು ಅವಕಾಶ ನೀಡುವ ಗುರಿ ಹೊಂದಿದ್ದೆವು. ಹಿರಿಯರು, ಕಿರಿಯರು ಒಟ್ಟಾಗಿ ಆಡುವುದು ಇಲ್ಲಿನ ವಿಶೇಷತೆಯಾಗಿದ್ದು, ೨೦೨೩ ರಲ್ಲಿ ಅಂತರ ಕೊಡವ ಸಮಾಜಗಳ ನಡುವೆ ಲೆದರ್‌ಬಾಲ್ ಕ್ರಿಕೆಟ್ ನಡೆಸಲಾಯಿತು. ಕೌಟುಂಬಿಕ ಕ್ರಿಕೆಟ್ ಹೆಚ್ಚು ಜನರಿಗೆ ಆಡಲು ಅವಕಾಶ ಮಾಡಿಕೊಟ್ಟಿದೆ. ಈ ಬಾರಿ ಕೂಡ ಉತ್ತಮ ಟೂರ್ನಿ ಆಯೋಜನೆಗೊಳ್ಳಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಎ. ಎ. ಅಜಯ್, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರAಡ ಬೋಪಣ್ಣ ಇದ್ದರು.