ಮಡಿಕೇರಿ, ಮಾ. ೨೮: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ)ನ ಆಡಳಿತ ಮಂಡಳಿಗೆ ನಿರ್ದೇಶಕರ ಆಯ್ಕೆಯಾಗಿದ್ದು, ಇದೀಗ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ನ್ಯಾಯಾಲಯ ಮೂಲಕ ನಿರ್ದೇಶನ ಜಾರಿಯಾಗಿದೆ. ಮಾರ್ಚ್ ೧೭ ರಂದು ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಹಾಲಿ ಆಡಳಿತ ಮಂಡಳಿ ಅವಧಿ ಏಪ್ರಿಲ್ ೪ಕ್ಕೆ ಕೊನೆಗೊಳ್ಳುತ್ತಿದೆ. ಆದರೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ಮುಂದಾಗದ ಚುನಾವಣಾಧಿಕಾರಿಗಳ ನಿಲುವನ್ನು ಪ್ರಶ್ನಿಸಿ ಹಾಲಿ ಅಧ್ಯಕ್ಷರಾಗಿರುವ ಕೊಡಂದೇರ ಬಾಂಡ್ ಗಣಪತಿ ಅವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಕೋರಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ರಿಟರ್ನಿಂಗ್ ಆಫೀಸರ್ ಆಗಿದ್ದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಗಳು ಈ ಬಗ್ಗೆ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಬರೆದಿದ್ದ ಪತ್ರಕ್ಕೆ ಅವರು ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜೂನ್ ೪ರತನಕ ಚುನಾವಣೆ ನಡೆಸಲು ಸಾಧ್ಯವಿಲ್ಲ. ಸದರಿ ಚುನಾವಣೆಯನ್ನು ನೀತಿ ಸಂಹಿತೆ
(ಮೊದಲ ಪುಟದಿಂದ) ಮುಗಿದ ಬಳಿಕ ನಡೆಸಲಾಗುವುದು ಎಂಬ ಉತ್ತರ ಲಭ್ಯವಾಗಿತ್ತು. ಆದರೆ ಮಾರ್ಚ್ ೨೧ರಂದು ಸಹಕಾರ ಇಲಾಖೆಯಿಂದ ಜಾರಿಯಾಗಿದ್ದ ಮರು ಆದೇಶದಲ್ಲಿ ಈಗಾಗಲೇ ಆಡಳಿತ ಮಂಡಳಿ ಚುನಾವಣೆ ನಡೆದು ಪದಾಧಿಕಾರಿಗಳ ಚುನಾವಣೆ ಬಾಕಿ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಚುನಾವಣೆ ನೀತಿ ಸಂಹಿತೆ ಪ್ರಕಾರ ಚುನಾವಣೆ ಮುಂದೂಡುವ ಆದೇಶ ಅನ್ವಯವಾಗುವುದಿಲ್ಲ ಎಂದು ಸೂಚಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಬಾಂಡ್ ಗಣಪತಿ ಅವರು ಉಚ್ಚನ್ಯಾಯಾಲದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಈ ಬಗ್ಗೆ ಆದೇಶ ಹೊರಡಿಸಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿದೆ. ಏಪ್ರಿಲ್ ೪ಕ್ಕೆ ಹಾಲಿ ಆಡಳಿತ ಮಂಡಳಿ ಅಧಿಕಾರ ಪೂರ್ಣಗೊಳ್ಳುತ್ತಿದ್ದು ಇದರೊಳಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಬೇಕಿದೆ.