ಸೋಮವಾರಪೇಟೆ, ಮಾ. ೨೯: ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ಈ ಕಾಮ್ ಕಮಾಂಡಿಟೀಸ್, ಕಾಫಿ ಮಂಡಳಿ ಮತ್ತು ಭುವನ ಮಂದಾರ ರೈತ ಉತ್ಪಾದಕ ಸಂಸ್ಥೆ ಸಹಯೋಗದೊಂದಿಗೆ ಮಣ್ಣು ಪರೀಕ್ಷೆ ಕುರಿತು ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮದಲ್ಲಿ ಈ ಕಾಮ್ ಸಂಸ್ಥೆಯ ಮುಖ್ಯಸ್ಥರಾದ ಡಾ. ಚಂಗಲ ರಾಯಪ್ಪ ಅವರು, ಸುಸ್ಥಿರ ಕಾಫಿ ಕೃಷಿಯಲ್ಲಿ ಮಣ್ಣಿನ ಮಹತ್ವದ ಬಗ್ಗೆ ಹಾಗೂ ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿಯ ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿAದ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಭುವನ ಮಂದಾರ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಅವರು, ಎಲ್ಲಾ ಕಾಫಿ ಬೆಳೆಗಾರರು ತಮ್ಮ ತೋಟದ ಮಣ್ಣಿನ ಮಾದರಿಯನ್ನು ಪರೀಕ್ಷಿಸಬೇಕು. ಮಣ್ಣಿಗೆ ಬೇಕಾದ ಪೋಷಕಾಂಶಗಳನ್ನು ನೀಡಬೇಕು. ಆ ಮೂಲಕ ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.

ಕಾಫಿ ಮಂಡಳಿಯ ಮಣ್ಣು ವಿಜ್ಞಾನಿ ಡಾ. ಎಸ್.ಎ. ನದಾಫ್, ಮಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ಕಾಫಿ ಇಳುವರಿ ಹೆಚ್ಚಿಸಲು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದರಲ್ಲದೆ, ಆಮ್ಲೀಯ ಮಣ್ಣನ್ನು ಸರಿಪಡಿಸಿಕೊಳ್ಳಲು ಬೇಕಾಗುವ ಕ್ರಮಗಳ ಬಗ್ಗೆ ವಿವರಿಸಿದರು. ಇದೇ ಸಂದರ್ಭ ಮಣ್ಣಿನ ರಸಸಾರವನ್ನು ಸ್ಥಳದಲ್ಲಿ ಪರೀಕ್ಷೆ ಮಾಡಿ, ನಿಗದಿತ ಪ್ರಮಾಣದ ಸುಣ್ಣವನ್ನು ಶಿಫಾರಸ್ಸು ಮಾಡಿ ವರದಿಯನ್ನು ಸ್ಥಳದಲ್ಲೇ ನೀಡಲಾಯಿತು. ಇ-ಕಾಮ್ ಸಂಸ್ಥೆಯ ತಾರಾ ಸೇರಿದಂತೆ ಇತರರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.