ಸೋಮವಾರಪೇಟೆ, ಮಾ.೨೯ : ಲೋಕಸಭಾ ಚುನಾವಣೆ ಹಿನ್ನೆಲೆ ಗಡಿಗಳಲ್ಲಿ ಹೆಸರಿಗಷ್ಟೇ ಚೆಕ್ ಪೋಸ್ಟ್ ತೆರೆದಿರುವ ಚುನಾವಣಾ ಆಯೋಗ, ಇಂತಹ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸದೇ ಇರುವುದು ಕಂಡುಬAದಿದೆ.
ತಾಲೂಕಿನ ಬಾಣಾವರ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಬಿಸಿಲಿನ ತಾಪಕ್ಕೆ ಬಸವಳಿದು ಹೋಗಿದ್ದಾರೆ. ಸೋಮವಾರಪೇಟೆ-ಕೊಣನೂರು ರಾಜ್ಯ ಹೆದ್ದಾರಿ, ಕೊಡಗು-ಹಾಸನ ಗಡಿಯಲ್ಲಿರುವ ಈ ಚೆಕ್ ಪೋಸ್ಟ್ ನಲ್ಲಿ ದಿನದ ೨೪ ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಟ ತಲೆ ಮೇಲೊಂದು ಸೂರು ಇಲ್ಲದಾಗಿದೆ.
ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದ್ದು, ತಾ. ೨೮ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ಸುಲಲಿತ ಹಾಗೂ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಲ್ಲಲ್ಲಿ ಚೆಕ್ ಪೋಸ್ಟ್ ಗಳ ಮೂಲಕ ಹಣ ಮತ್ತಿತರೆ ಆಮಿಷದ ವಸ್ತುಗಳ ಸಾಗಾಟಕ್ಕೆ ಹದ್ದಿನ ಕಣ್ಣಿರಿಸಿದೆ. ಆದರೆ ಇಂಥ ಚೆಕ್ ಪೋಸ್ಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸದೆ ಇರುವುದು ವಿಪರ್ಯಾಸ.
ಕೊಡಗು, ಮೈಸೂರು ಲೋಕಸಭಾ ಕ್ಷೇತ್ರದ ಸೋಮವಾರಪೇಟೆಗೆ ಸಮೀಪದ ಹಾಸನ - ಕೊಡಗು ಗಡಿಭಾಗದ ಬಾಣಾವರ ಗೇಟ್ನಲ್ಲಿರುವ ಚೆಕ್ಪೋಸ್ಟ್ನಲ್ಲಿ ಶಾಮಿಯಾನ ಆಥವ ತಾತ್ಕಾಲಿಕ ಶೆಡ್ ಕೂಡ ನಿರ್ಮಿಸದೆ ಇರುವುದರಿಂದ ಅಧಿಕಾರಿಗಳು ಸುಡುಬಿಸಿಲಿನಲ್ಲಿಯೆ ಕುಳಿತು ಕಾರ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಆದೇಶಗಳನ್ನು ಮಾಡುವ ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿದ್ದರೆ, ಕಾನೂನು ಪಾಲಿಸುವ ಹೊಣೆ ಹೊತ್ತಿರುವ ಸಿಬ್ಬಂದಿಗಳು ಬಿಸಿಲಿನಲ್ಲಿ ಬೇಯಬೇಕಿದೆ.
ಚುನಾವಣೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರ, ಚುನಾವಣಾ ಕರ್ತವ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕನಿಷ್ಟ ಸೌಲಭ್ಯ ಒದಗಿಸದೇ ಇರುವುದು ಶೋಚನೀಯ. ಇದರೊಂದಿಗೆ ಬಾಣಾವರ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿಯೂ ಇದ್ದು, ರಾತ್ರಿ ವೇಳೆ ಯಾವುದೇ ರಕ್ಷಣೆ ಇಲ್ಲದೆ ಜೀವ ಕೈಯಲ್ಲಿಡಿದು ಕರ್ತವ್ಯ ನಿರ್ವಹಿಸುವಂತಾಗಿದೆ.
ತಕ್ಷಣ ಚುನಾವಣಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಚೆಕ್ ಪೋಸ್ಟ್ ಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಮುಂದಾಗಬೇಕಿದೆ. ಬಿಸಿಲಿನಲ್ಲಿ ದಿನಪೂರ್ತಿ ಕೆಲಸ ಮಾಡುವ ಸಿಬ್ಬಂದಿಗಳೂ ಸಹ ನಮ್ಮ ಹಾಗೆ ಮನುಷ್ಯರೇ ಎಂಬುದನ್ನು ಮನಗಾಣಬೇಕಿದೆ. ಚೆಕ್ಪೋಸ್ಟ್ನಲ್ಲಿ ತಾತ್ಕಾಲಿಕ ಶೆಡ್ ಅಥವಾ ಶಾಮಿಯಾನದ ವ್ಯವಸ್ಥೆ ಕಲ್ಪಿಸಿದರೆ ಸುಲಲಿತವಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ.
ತಾಲೂಕು ತಹಶೀಲ್ದಾರ್ ನವೀನ್ ಕುಮಾರ್ ಅವರು ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವರಿಕೆ ಮಾಡಿ, ಸೌಕರ್ಯ ಕಲ್ಪಿಸಲು ಮುಂದಾಗಬೇಕು ಎಂದು ಸಿಬ್ಬಂದಿಗಳ ಪರವಾಗಿ ಸ್ಥಳೀಯರು ಒತ್ತಾಯಿಸಿದ್ದಾರೆ.