ಕುಶಾಲನಗರ, ಮಾ.೨೯: ಗಡಿ ಜಿಲ್ಲೆಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡುವ ಮೂಲಕ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದಲ್ಲಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಕೂಡಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗಡಿ ಅಪರಾಧ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಗಡಿ ಭಾಗಗಳ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ೨೦೨೪ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ ವಹಿಸಬೇಕು. ದಾಖಲಾತಿ ರಹಿತವಾಗಿ ಯಾವುದೇ ನಗದು, ಗಾಂಜಾ, ಮದ್ಯ ಅಥವಾ ಚುನಾವಣಾ ಸಾಮಗ್ರಿಗಳು ರವಾನೆ ಆಗದಂತೆ ಎಚ್ಚರ ವಹಿಸಬೇಕು, ಈ ನಿಟ್ಟಿನಲ್ಲಿ ಗಡಿ ಭಾಗಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿ ಕೊಂಡು ಕಾರ್ಯ ನಿರ್ವಹಿಸಿದರೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಅವರು ಹೇಳಿದರು.

(ಮೊದಲ ಪುಟದಿಂದ) ಅಪರಾಧಿಗಳು ಜಿಲ್ಲೆಯ ಗಡಿಭಾಗದಲ್ಲಿ ತಲೆಮರೆಸಿಕೊಂಡ ಸಂದರ್ಭ ಜಂಟಿ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಬೇಕು, ವಾರೆಂಟ್ ರಹಿತ ಆರೋಪಿಗಳ ಪತ್ತೆಗೆ ಪರಸ್ಪರ ಸಹಕಾರ, ಅಪರಾಧಿಗಳು ತಲೆಮರೆಸಿಕೊಂಡಿದ್ದಲ್ಲಿ ಅವರ ಪತ್ತೆ ಕಾರ್ಯ ನಡೆಸಬೇಕು. ಕೊಲೆ ಆರೋಪಿಗಳು ಪತ್ತೆಯಾಗ ದಿದ್ದಲ್ಲಿ ಸುಳಿವು ಪತ್ತೆ ಹಚ್ಚುವ ನಿಟ್ಟಿನಲ್ಲಿ ಗಡಿ ಭಾಗಗಳ ಅಧಿಕಾರಿ ಸಿಬ್ಬಂದಿಗಳು ಸಹಕಾರ ನೀಡುವಂತಾಗಬೇಕು. ಮಕ್ಕಳು ಮಹಿಳೆಯರು ಕಾಣೆಯಾಗುವ ಪ್ರಕರಣಗಳ ಬಗ್ಗೆ ,ಅಸ್ವಾಭಾವಿಕ ಸಾವು, ಗುರುತು ಪತ್ತೆಯಾಗದ ಪ್ರಕರಣಗಳು , ಸೈಬರ್ ಕ್ರೈಂ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ, ವಿಶೇಷವಾಗಿ ಜಿಲ್ಲೆ ಮತ್ತು ಗಡಿ ಭಾಗದ ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬAಧಿಸಿದ ಜಿಲ್ಲಾ ಗಡಿಭಾಗದ ಪೊಲೀಸರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಪರಸ್ಪರ ಮಾಹಿತಿ ವಿನಿಮಯ ಮಾಡಲಾಯಿತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಆರ್ ವಿ ಗಂಗಾಧರಪ್ಪ ಅವರ ಮೂಲಕ ಆಯೋಜನೆಯಾದ ಸಭೆಯಲ್ಲಿ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳ ಗಡಿ ವ್ಯಾಪ್ತಿಯ ಉಪ ವಿಭಾಗಗಳ ಪೊಲೀಸ್ ಉಪ ಅಧೀಕ್ಷಕರು, ಪೊಲೀಸ್ ಇನ್ಸ್ಪೆಕ್ಟರ್‌ಗಳು ಮತ್ತು ಗಡಿ ಭಾಗದ ಠಾಣೆಗಳಾದ ಬೈಲಕೊಪ್ಪ, ಕೊಣನೂರು, ಸುಳ್ಯ ವ್ಯಾಪ್ತಿಯ ವಿವಿಧ ವಿಭಾಗಗಳ ಪೊಲೀಸ್ ಉಪನಿರೀಕ್ಷಕರು ಪಾಲ್ಗೊಂಡಿದ್ದರು.

ವೀರಾಜಪೇಟೆಯಲ್ಲಿ ಸಭೆ

ವೀರಾಜಪೇಟೆಯಲ್ಲಿ ಗಡಿ ಅಪರಾಧ ಸಭೆ ನಡೆಯಿತು. ಕೇರಳ ರಾಜ್ಯದ ಇರಿಟಿಯ ಎಎಸ್‌ಪಿ ಯೋಗೇಶ್ ಮಾಂದಯ, ವೀರಾಜಪೇಟೆ ಡಿವೈಎಸ್‌ಪಿ ಆರ್. ಮೋಹನ್‌ಕುಮಾರ್ ಸೇರಿದಂತೆ ವಿವಿಧ ಭಾಗಗಳ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

-ಚAದ್ರಮೋಹನ್