ವೀರಾಜಪೇಟೆ, ಮಾ. ೨೯: ಮಳಿಗೆಯನ್ನು ಹೊಂದಿರುವ ಮಾಲೀಕ ಮತ್ತು ಕೆಲಸಗಾರರು ಒಂದೇ ನಾಣ್ಯದ ಎರಡು ಮುಖಗಳಂತೆ ಎಂದರು. ಚಿನ್ನ- ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕೆ.ಕೆ. ಶ್ರೀನಿವಾಸ್ ಅವರು ಹೇಳಿದರು.
ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ವತಿಯಿಂದ ಬಿಟ್ಟಂಗಾಲದ ಕೊಡಗು ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ವಾರ್ಷಿಕ ಮಹಾಸಭೆಯು ನಡೆಯದೆ ಇದೀಗ ಮಹಾಸಭೆ ನಡೆದಿದೆ. ವಾರ್ಷಿಕ ಮಹಾಸಭೆಯೊಂದಿಗೆ ಹಲವು ಮನೋರಂಜನಾ ಮತ್ತು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಮಾಲೀಕರು ಹಾಗೂ ಕೆಲಸಗಾರರ ಕುಟುಂಬ ವರ್ಗಗಳನ್ನು ಒಂದೇ ವೇದಿಕೆಯಲ್ಲಿ ಒಂದುಗೂಡುವAತೆ ಮಾಡಿರುವುದು ಆಶಾಧಾಯಕ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು. ೨೦೦೧ ರಲ್ಲಿ ಆರಂಭವಾದ ಸಂಘವು ೨೩ ವರ್ಷಗಳನ್ನು ಪೂರೈಸಿದೆ. ಕರ್ನಾಟಕ ರಾಜ್ಯ ಸರ್ಕಾರ ಆದೇಶದ ಅನುಸಾರವಾಗಿ ಹಾಲ್ಮಾರ್ಕ್ ತತ್ವದ ಮೇಲೆ ಶುದ್ಧ ಚಿನ್ನ ಪಾರದರ್ಶಕವಾದ ಚಿನ್ನಾಭರಣ ತಯಾರಿಕೆ ಮಾಡಿ ಗ್ರಾಹಕರಿಗೆ ಮಾರಾಟ ಮಾಡುವ ಕ್ರಮದಿಂದ ಎಲ್ಲಿಯೂ ಲೋಪವಾಗದೆ ಗ್ರಾಹಕರಿಗೆ ತಲುಪಿಸುವಂತಾಗಿದೆ. ಕೇಂದ್ರ ಸರ್ಕಾರದ ಹೆಚ್.ಓ.ಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿದ್ದು ವರ್ತಕರು ಮತ್ತು ಕೆಲಸಗಾರರಿಗೆ ವರಧಾನವಾಗಿ ಪರಿಣಮಿಸಿದೆ ಎಂದರು.
ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತನ್ನ ಸೇವಾ ಅವಧಿಯಲ್ಲಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕೈಜೋಡಿಸಿದ್ದಾರೆ. ಸಂಘವು ಇದೀಗ ಸುಮಾರು ೪೦ ಲಕ್ಷ ರೂ.ಗಳ ಲಾಭದಲ್ಲಿ ಮುಂದುವರೆದಿದೆ. ಸಂಘದ ಸದಸ್ಯರ ಚೀಟಿ ಹಣದಿಂದ ಸಂಘವು ಬೃಹತ್ ಮೊತ್ತದ ದಾಪುಗಾಲು ಇಟ್ಟಿದೆ. ಸಂಘವು ಇದೀಗ ಸುಮಾರು ೧೯ ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಖರೀದಿ ಮಾಡಿದ್ದು ಮುಂದಿನ ಆಡಳಿತ ಮಂಡಳಿಯ ಪದಾಧಿಕಾರಿಗಳು ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.
ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಸಹ ಕಾರ್ಯದರ್ಶಿ ವಿ.ವಿ. ಜಿತೇಂದ್ರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಘದ ಖಜಾಂಚಿ ಎ.ಎನ್. ದಶರಥ ಅವರು ವಾರ್ಷಿಕ ಲೆಕ್ಕ ಪತ್ರ ಮಂಡಣೆ ಮಾಡಿದರು.
ನೂತನ ಆಡಳಿತ ರಚನೆ : ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ಆರ್. ರಾಜೇಶ್ ಶೇಟ್ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಎ.ಪಿ. ಲೋಕೇಶ್ ಅವರು ಆಯ್ಕೆಗೊಂಡರು. ಐದು ಮಂದಿ ಪದಾಧಿಕಾರಿಗಳು ಸೇರಿದಂತೆ ೧೯ ಮಂದಿ ನಿರ್ದೇಶಕರಾಗಿ ನೂತನ ಆಡಳಿತ ಮಂಡಳಿಗೆ ಆಯ್ಕೆಗೊಳಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಹಿರಿಯ ಸದಸ್ಯರನ್ನು ಸಂಘದ ಸನ್ಮಾನಿಸಲಾಯಿತು. ಅಲ್ಲದೆ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಘದ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಟ್ಟು ೧೫ ಮಂದಿ ಭಾಗವಹಿಸಿದ್ದರು. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಉಪಾಧ್ಯಕ್ಷ ಉಲ್ಲಾಸ್ ಶೇಟ್, ನಿವೃತ್ತ ಶಿಕ್ಷಕ ಎ.ವಿ ವೆಂಕಟೇಶ್ ಶೇಟ್, ಪದಾಧಿಕಾರಿಗಳು ನಿರ್ದೇಶಕರು ಉಪಸ್ಥಿತರಿದ್ದರು.
ಸಂಘದ ಸಹ ಕಾರ್ಯದರ್ಶಿ ವಿ.ವಿ. ಜಿತೇಂದ್ರ ಅವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಎ.ಪಿ. ಲೋಕೇಶ್ ಸ್ವಾಗತಿಸಿ ವಂದಿಸಿದರು.
ವೀರಾಜಪೇಟೆ ತಾಲೂಕು ಚಿನ್ನ-ಬೆಳ್ಳಿ ವರ್ತಕರ ಮತ್ತು ಕೆಲಸಗಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ಜಿಲ್ಲಾ ಸಂಘ ಮತ್ತು ವಿವಿಧ ಸ್ಥಳಗಳಿಂದ ಆಗಮಿಸಿದ ಸಂಘದ ಸದಸ್ಯರು ಮತ್ತು ಕುಟುಂಭ ವರ್ಗದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.