ಮಡಿಕೇರಿ, ಮಾ. ೨೮: ವೀರ ಅಮರ ಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸಾಹಸಗಾಥೆಯನ್ನು ವಿದ್ಯಾರ್ಥಿಗಳಿಗೆ ನಿರಂತರ ಪರಿಚಯಿಸುವ ಕಾರ್ಯವಾಗಬೇಕು ಎಂದು ರಾಷ್ಟçಪತಿ ಪ್ರಶಸ್ತಿ ಪುರಸ್ಕೃತರಾದ ಮೇಜರ್ ಬಿದ್ದಂಡ ಎ.ನಂಜಪ್ಪ (ನಿ) ಅಭಿಪ್ರಾಯಪಟ್ಟರು.
ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶ ವಿದೇಶಿಗರು ಜನರಲ್ ತಿಮ್ಮಯ್ಯ ಅವರ ಬಗ್ಗೆ ಅಪಾರ ಅಭಿಮಾನ ಮತ್ತು ಗೌರವ ಹೊಂದಿದ್ದಾರೆ. ಕೊಡಗಿನ ವಿದ್ಯಾರ್ಥಿಗಳಲ್ಲಿ ಕೂಡ ತಿಮ್ಮಯ್ಯ ಅವರ ಬಗ್ಗೆ ಅಭಿಮಾನ ಮೂಡಿಸಬೇಕು, ಅವರ ಆದರ್ಶ ಗಳನ್ನು ತಿಳಿಹೇಳಬೇಕು ಎಂದರು.
ಜನರಲ್ ತಿಮ್ಮಯ್ಯ ಅವರು ಹುಟ್ಟಿದ ಮನೆ ಸನ್ನಿಸೈಡ್ ಸ್ಮಾರಕ ಈಗ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಭವನವಾಗಿದೆ. ಅಲ್ಲಿ ಅವರ ಇತಿಹಾಸ ಮಾತ್ರವಲ್ಲ,
(ಮೊದಲ ಪುಟದಿಂದ) ಭಾರತೀಯ ಸೇನೆಯ ಇತಿಹಾಸವನ್ನೂ ತೆರೆದಿಡಲಾಗಿದೆ. ಅಲ್ಲಿನ ಪ್ರತಿ ಕೋಣೆಯು ಸೈನಿಕನ ಕಥೆಯನ್ನು ಹೇಳುತ್ತಿದೆ. ಸೈನಿಕರ ನಾಡು ಎಂಬ ಕೀರ್ತಿ ಹೊಂದಿರುವ ಕೊಡಗಿನಲ್ಲಿ ತಿಮ್ಮಯ್ಯ ಮ್ಯೂಸಿಯಂ ರೂಪುಗೊಂಡಿರುವುದು ಭಾರತಕ್ಕೆ ಹೆಮ್ಮೆ. ವಿದ್ಯಾರ್ಥಿಗಳಿಗೆ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಪರಿಚಯ ಮಾಡಿಕೊಟ್ಟು ಸೇನಾ ಸಾಹಸದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ತಿಮ್ಮಯ್ಯ ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವAಡ ಚೀಯಣ್ಣ, ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಿದ್ದರು. ಕಾಫಿ ಬೆಳೆಗಾರರು ಹಾಗೂ ಉತ್ತಮ ಕ್ರೀಡಾಪಟುವಾಗಿಯೂ ಯಶಸ್ಸು ಸಾಧಿಸಿದ್ದರು ಎಂದರು.
೧೯೦೬ ರ ಮಾರ್ಚ್ ೩೧ ರಂದು ಕೊಡಂದೇರ ಕುಟುಂಬದ ತಿಮ್ಮಯ್ಯ ಹಾಗೂ ಸೀತಮ್ಮ ದಂಪತಿಯ ಪುತ್ರನಾಗಿ ಜನಿಸಿದ ತಿಮ್ಮಯ್ಯ ಅವರು ಸೇನಾ ಕ್ಷೇತ್ರದ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಕರೆ ನೀಡಿದರು.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ.ಮುತ್ತಪ್ಪ, ತಿಮ್ಮಯ್ಯ ಶಾಲೆಯ ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ, ಕಾರ್ಯನಿರ್ವಾಹಕಿ ಮಕ್ಕಾಟಿರ ಪೊನ್ನಮ್ಮ, ಕರೆಸ್ಪಾಂಡೆAಟ್ ಕನ್ನಂಡ ಕವಿತಾ ಬೊಳ್ಳಪ್ಪ, ನಿರ್ದೇಶಕ ಮಂಡೀರ ಸದಾ ಮುದ್ದಪ್ಪ, ಹಿರಿಯ ಸಲಹೆಗಾರರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಶಾಲೆಯ ನಿರ್ದೇಶಕರಾದ ಬೊಪ್ಪಂಡ ಸರಳ ಕರುಂಬಯ್ಯ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ, ಕಾಂಡೆರ ಲಲ್ಲು ಕುಟ್ಟಪ್ಪ, ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕರಾದ ಬಬೀನ ಜೀವನ್ ಸ್ವಾಗತಿಸಿ, ಎ.ಪಿ.ಪ್ರಮೀಳ, ನಮಿತ ಆರ್ ರಾವ್, ಕೆ.ಎನ್.ಭರತ್ ಕಾರ್ಯಕ್ರಮ ನಿರೂಪಿಸಿದರು. ಕೆ.ಎಸ್.ಪೊನ್ನಮ್ಮ ಅತಿಥಿಗಳ ಪರಿಚಯ ಮಾಡಿದರು. ಕ್ರೀಡಾ ನಾಯಕಿ ದಿಯಾ ದೇಚಮ್ಮ ವಂದಿಸಿದರು. ಕಾರ್ಯಕ್ರಮದಲ್ಲಿ ಮೇಜರ್ ಬಿದ್ದಂಡ ಎ.ನಂಜಪ್ಪ (ನಿ) ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ೧ನೇ ತರಗತಿ ಮತ್ತು ೨ನೇ ತರಗತಿ ವಿದ್ಯಾರ್ಥಿಗಳ ಹೂಪ್ ಟ್ರೀ, ೩ ರಿಂದ ೫ನೇ ತರಗತಿ ವಿದ್ಯಾರ್ಥಿಗಳÀ ಅಮ್ರೆಲ ಡ್ರಿಲ್ ಮತ್ತು ೬ ರಿಂದ ೯ನೇ ತರಗತಿ ವಿದ್ಯಾರ್ಥಿಗಳÀ ಕೋಲ್ ಡ್ರಿಲ್ ಮತ್ತು ಕರಾಟೆ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಬೆಳ್ಳಿ ಮಹೋತ್ಸವದ ಪ್ರಯುಕ್ತ ವಿವಿಧ ವಿಭಾಗದಲ್ಲಿ ನಡೆದ ಕ್ರೀಡಾಕೂಟದ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ನಾಳೆ ಸಾಂಸ್ಕೃತಿಕ ಕಾರ್ಯಕ್ರಮ
ತಾ.೩೦ ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ೧೦ ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಮೈಸೂರಿನ ಎಸ್‌ಬಿಆರ್‌ಆರ್ ಮಹಾಜನ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾದ ಹರೀಶ್ ಕೊಡಂದೇರ ಭಾಗವಹಿಸಲಿದ್ದು, ತಿಮ್ಮಯ್ಯ ಶಾಲೆಯ ಕರೆಸ್ಪಾಂಡೆAಟ್ ಕನ್ನಂಡ ಕವಿತಾ ಬೊಳ್ಳಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ತಾ.೩೧ ರಂದು ಕೊಡವ ಸಮಾಜ ಮತ್ತು ತಿಮ್ಮಯ್ಯ ಶಾಲೆಯ ಅಧ್ಯಕ್ಷ ಮಂಡುವAಡ ಪಿ.ಮುತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಮೇರಿಯಂಡ ನಾಣಯ್ಯ, ಕಾಫಿ ಬೆಳೆಗಾರ ಹಾಗೂ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ನಡಿಕೇರಿಯಂಡ ಬೋಸ್ ಮಂದಣ್ಣ ಪಾಲ್ಗೊಳ್ಳಲಿದ್ದಾರೆ.