ನಾಪೋಕ್ಲು, ಮಾ. ೨೯: ಕೊಡಗಿನಲ್ಲಿ ವೀರಶೈವ ಧರ್ಮ ಪಸರಿಸಲು ಹಾಲೇರಿ ರಾಜರ ಕೊಡುಗೆ ಅಪಾರ ಎಂದು ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶಿವಪ್ಪ ವಿ.ವಿ. ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ನಾಪೋಕ್ಲು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ (ನಾಪೋಕ್ಲು) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ. ಶಾಂತಮಲ್ಲ ಸ್ವಾಮಿಗಳ ದತ್ತಿ ಮತ್ತು ದಿ. ಎಂ.ಜಿ. ಪದ್ಮನಾಭ ಕಾಮತ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ನೂತನ ಕೊಡಗಿಗೆ ವೀರಶೈವ ದೊರೆಗಳಾದ ಹಾಲೇರಿ ದೊರೆಗಳ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಸಂಸ್ಕೃತಿ ಕಾರ್ಯಗಳಿಗೆ ದುಡಿದ ಉದ್ಯಮಿಗಳ ಕುರಿತಾದ ದತ್ತಿ ಉಪನ್ಯಾಸದಲ್ಲಿ ಮಾತನಾಡಿದ ಕ.ಸಾ.ಪ. ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಅವರು ಕನ್ನಡ ಸಾಹಿತ್ಯ ಬೆಳವಣಿಗೆಗೆ ಸಾಹಿತಿಗಳಷ್ಟೇ ಕೊಡುಗೆ ಉದ್ಯಮಿಗಳು ಮತ್ತು ಇತರ ಕ್ಷೇತ್ರದ ಸಾಹಿತ್ಯ ಆರಾಧಕರ ಕೊಡುಗೆಗಳು ಎಂದು ಕೆಲವು ಕೊಡುಗೆಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್‌ರವರು ಕಾರ್ಯಕ್ರಮ ಆಯೋಜನೆಯ ಉದ್ದೇಶದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಾಪೋಕ್ಲು ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ಡಾ|| ಕಾವೇರಿ ಪ್ರಕಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ ಹಾಗೂ ಹೊಸ ಪೀಳಿಗೆಗೆ ಕನ್ನಡದ ಒಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯುಎಸಿ ಸಂಚಾಲಕ ನಂದೀಶ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಪದ್ಮಾವತಿ, ದೇವಯ್ಯ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಂಗಸ್ವಾಮಿ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸುಕ್ರುಮಣಿ ಲುಕಿಮಣಿ ಪ್ರಾರ್ಥಿಸಿ, ಕನ್ನಡ ಉಪನ್ಯಾಸಕಿ ಹರಿಣಿ ನಿರೂಪಿಸಿ, ದ್ವಿತೀಯ ಬಿಎ ವಿದ್ಯಾರ್ಥಿನಿ ರಂಜಿತಾ ವಂದಿಸಿದರು.