ಗೋಣಿಕೊಪ್ಪಲು, ಮಾ. ೨೯: ಕೊಡಗಿನ ಪ್ರವಾಸಿ ತಾಣಕ್ಕೆ ಇದೀಗ ಮತ್ತೊಂದು ಗರಿ ಸೇರ್ಪಡೆಗೊಂಡಿದ್ದು ತಿತಿಮತಿ ಆನೆ ಚೌಕೂರು ಬಳಿಯ ಮತ್ತಿಗೋಡು ಸಾಕಾನೆ ಶಿಬಿರವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ೧ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿರುವ ಸಾಕಾನೆ ಶಿಬಿರದಲ್ಲಿ ಅಭಿಮನ್ಯು ಸೇರಿದಂತೆ ೧೭ ಆನೆಗಳನ್ನು ಪ್ರವಾಸಿಗರು ಸಮೀಪದಿಂದ ನೋಡುವ ಸೌಭಾಗ್ಯ ಒದಗಿ ಬಂದಿದೆ.
ಕೊಡಗು ಮೈಸೂರು ಮುಖ್ಯ ರಸ್ತೆಯ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ, ಗಡಿಭಾಗ ಆನೆಚೌಕೂರುವಿನ ಸಮೀಪವಿರುವ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ನಿಗದಿತ ವೇಳೆಯಲ್ಲಿ ಆನೆಗಳನ್ನು ಅತ್ಯಂತ ಸಮೀಪದಿಂದ ವೀಕ್ಷಣೆ ಮಾಡುವ ಅವಕಾಶವನ್ನು ಇಲಾಖೆ ಒದಗಿಸಿದೆ.
ಸಾಕಾನೆ ಶಿಬಿರಕ್ಕೆ ಆಗಮಿಸುತ್ತಿದ್ದಂತೆಯೇ, ಶಿಬಿರದಲ್ಲಿರುವ ೧೭ ಸಾಕಾನೆಗಳ ತೂಕ ಸೇರಿದಂತೆ ಆನೆಗಳ ಹೆಸರು ಇತ್ಯಾದಿ ಮಾಹಿತಿಗಳುಳ್ಳ ನಾಮಫಲಕವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಕುಳಿತುಕೊಳ್ಳಲು ವಿಸ್ತಾರವಾದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಶಿಬಿರದಲ್ಲಿ ಆನೆಗಳ ಬಗ್ಗೆ ಮಾಹಿತಿ ಪಡೆಯಲು ಮಾಹಿತಿ ಕೇಂದ್ರ ತೆರೆಯಲಾಗಿದೆ. ಈಗಾಗಲೇ ಸರ್ಕಾರದಿಂದ ಬಿಡುಗಡೆಯಾದ ಒಂದು ಕೋಟಿ ಅನುದಾನವನ್ನು ಬಳಕೆ ಮಾಡಿಕೊಂಡು ಶಿಬಿರದ ಆವರಣದಲ್ಲಿ ಅವಶ್ಯವಿರುವ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಸ್ಥಳದಲ್ಲಿ ಶಿಬಿರಕ್ಕೆ ತೆರಳಲು ಬೃಹತ್ ದ್ವಾರ ನಿರ್ಮಿಸಲಾಗಿದೆ. ಪ್ರವಾಸಿಗರು ತೆರಳುವ ರಸ್ತೆಗೆ ಇಂಟರ್ಲಾಕ್ ಅಳವಡಿಸಲಾಗಿದೆ.
ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಾಗೂ ಆನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಲಭಿಸುವ ಸಲುವಾಗಿ ದಕ್ಷಿಣ ಕೊಡಗಿನ ಮತ್ತಿಗೋಡುವಿನಲ್ಲಿ ಆನೆಗಳ ವೀಕ್ಷಣೆಗೆ ಮುಕ್ತ ಅವಕಾಶ ಒದಗಿಸಲಾಗಿದೆ. ಒಂದು ವರ್ಷದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ. ಇದೀಗ ಶಿಬಿರದಲ್ಲಿರುವ ಸಾಕಾನೆಗಳನ್ನು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಮೈಸೂರು, ತಿತಿಮತಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರವು ನಡೆಯುತ್ತಿದ್ದು ಈ ಹಿಂದೆ ಪ್ರವಾಸಿಗರು ರಸ್ತೆ ಬದಿಯಲ್ಲಿ ನಿಂತು ಸಾಕಾನೆಗಳನ್ನು ವೀಕ್ಷಣೆ ಮಾಡುತ್ತಿದ್ದರು. ಈ ಹಿನ್ನಲೆಯಲ್ಲಿ ಈ ಕೇಂದ್ರವನ್ನು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಜನೆ ರೂಪಿಸಿತ್ತು. ಸಾಕಾನೆ ಶಿಬಿರದಲ್ಲಿ ಪ್ರವಾಸಿಗರಿಗೆ ಸಾಕಾನೆಗಳ ವೀಕ್ಷಣೆಗೆ ಅವಕಾಶ ಲಭ್ಯವಾಗುವುದರಿಂದ ಮತ್ತಿಗೋಡು ಸಾಕಾನೆ ಶಿಬಿರವು ಉತ್ತಮ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಇತ್ತಿಚೇಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಆನೆ ಶಿಬಿರವನ್ನು ಉದ್ಘಾಟಿಸಿದರು.
ನಾಗರಹೊಳೆ ವನ್ಯಜೀವಿ ವಲಯಕ್ಕೆ ಒಳಪಟ್ಟಿರುವ ಆನೆಚೌಕೂರು ಗಡಿಯಿಂದ ತಿತಿಮತಿ-ಗೋಣಿಕೊಪ್ಪ ಮುಖ್ಯ ರಸ್ತೆಯ ಸಮೀಪವಿರುವ ಮತ್ತಿಗೋಡು ಸಾಕಾನೆ ಶಿಬಿರದ ಸಾಕಾನೆಗಳು ವಿವಿಧ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ, ಹುಲಿ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿವೆ. ಇಂತಹ ಆನೆಗಳನ್ನು ಅತ್ಯಂತ ಸಮೀಪದಿಂದ ನೋಡುವುದೇ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಶಿಬಿರದಲ್ಲಿ ಸಾಕಾನೆಗಳ ಆಹಾರ ಪದ್ಧತಿ, ಭಾಷೆ, ಸ್ನಾನ, ಇತ್ಯಾದಿಗಳ ಮಾಹಿತಿಗಳನ್ನು ನೇರವಾಗಿ ತಿಳಿದುಕೊಳ್ಳುವ ಅವಕಾಶವಿದೆ.
- ವಿಶೇಷ ವರದಿ: ಹೆಚ್.ಕೆ. ಜಗದೀಶ್