ಕಣಿವೆ: ಮಳೆಗಾಲದಲ್ಲಿ ಮಳೆಯ ನೀರಿಗೆ ಮೈದುಂಬಿ ತನ್ನ ವಯ್ಯಾರದೊಂದಿಗೆ ಪ್ರವಾಸಿಗರ ಮನವನ್ನು ಸೂರೆಗೊಳ್ಳುತ್ತಿದ್ದ ನಿಸರ್ಗ ದೊಡತಿಯ ಸ್ವರ್ಣಸುಂದರಿ ಚಿಕ್ಲಿಹೊಳೆಯ ಆ ಚೆಲುವೆಲ್ಲಿ...?

ನೀರೇ ಇಲ್ಲದೇ ಬಟಾಬಯಲಾಗಿ ಸೂರ್ಯನ ತಾಪಕ್ಕೆ ಒಣಗಿ ನಿಂತು ನೋಡುಗರಲ್ಲಿ ದಿಗ್ಭçಮೆ ಮೂಡಿಸು ತ್ತಿರುವ ಜಲಾಶಯ... ಪಶ್ಚಿಮಘಟ್ಟ ಸಾಲಿನ ಮಲೆನಾಡು ಪ್ರದೇಶ ಕೊಡಗಿನಲ್ಲಿ ಕಳೆದ ಬಾರಿ ವಾಡಿಕೆಯ ಮಳೆ ಸುರಿಯದ ಕಾರಣ ಕೆರೆ, ತೊರೆ, ನದಿ, ಜಲಾಶಯಗಳಲ್ಲಿ ವಾಡಿಕೆಯ ನೀರು ಸಂಗ್ರಹವಾಗಲಿಲ್ಲ. ಹಾಗಾಗಿ ಈ ಬಾರಿ ಮಾರ್ಚ್ ತಿಂಗಳು ಕಳೆಯುತ್ತಾ ಬಂದರೂ ಕೂಡ ಮಳೆ ಬರಲೇ ಇಲ್ಲ.

ಆದ್ದರಿಂದ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿನ ಜಲಾಶಯಗಳು ನೀರಿಲ್ಲದೇ ಬಿಕೋ ಎನ್ನಲಾರಂಭಿಸಿದ್ದು, ಕುಶಾಲನಗರ ತಾಲೂಕಿನ ರಂಗಸಮುದ್ರ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಮರುಭೂಮಿಯಂತಾಗುತ್ತಿದೆ. ಇದರಿಂದಾಗಿ ತಾಪಮಾನ ದಿನೇ ದಿನೇ ಏರುಗತಿಯಲ್ಲಿದ್ದು ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆ ಉಂಟಾಗಿದೆ. ಅಷ್ಟು ಮಾತ್ರವಲ್ಲ ಕಾಡಾನೆಗಳು ಸೇರಿದಂತೆ ಇತರೇ ವನ್ಯ ಪ್ರಾಣಿಗಳ ದಾಹಕ್ಕೂ ಎಲ್ಲಿ ಸಂಚಕಾರ ವಾಗುತ್ತದೋ ಎಂಬ ಆತಂಕ ಉಂಟಾಗುತ್ತಿದೆ.

ಹಾಟ್ ಸ್ಪಾಟ್ ಆಗಿರುವ ಶ್ರದ್ಧಾಕೇಂದ್ರ

ಚಿಕ್ಲಿಹೊಳೆ ಜಲಾಶಯದ ಒಡಲಲ್ಲಿ ಹುದುಗಿ ಹೋಗಿದ್ದಂತಹ ಒಂದು ಕಾಲದ ಶ್ರದ್ಧಾ ಕೇಂದ್ರವಾಗಿದ್ದ ವಿಶ್ವನಾಥ ದೇಗುಲದ ಪಳೆಯುಳಿಕೆಗಳು ಇದೀಗ ಪ್ರವಾಸಿಗರ ಹಾಟ್ ಸ್ಪಾಟ್ ಆಗುತ್ತಿದೆ. ಇಲ್ಲಿನ ಶಿಥಿಲಗೊಂಡ ದೇವಾಲಯದ ಕಟ್ಟಡದ ಗೋಪುರದ ಮೇಲೆ ಹಾರಿಸಿರುವ ಧ್ವಜ ಭಕ್ತಿ ಭಾವ ತೋರುವ ಪ್ರವಾಸಿಗರನ್ನು ತನ್ನತ್ತ ಕರೆದಂತಿದೆ.

ಜಲಾಶಯದ ಒಡಲಲ್ಲಿ ಅನೇಕ ದಶಕಗಳಿಂದಲೂ ಬೆತ್ತಲೆಯಾಗಿ ನಿಂತಿರುವ ಬೆಲೆ ಬಾಳುವ ಅಮೂಲ್ಯ ವಾದ ತೇಗ ಹಾಗೂ ಬೀಟೆಯ ಮರಗಳು ನೋಡುಗರ ಗಮನ ಸೆಳೆಯುತ್ತಿವೆ.

ಪಕ್ಷಿಗಳ ಕಲರವ

ನೀರಿಲ್ಲದ ಜಲಾಶಯದ ವಿಶಾಲವಾದ ಪ್ರದೇಶದ ನಡುಗಡ್ಡೆ ಗಳಂತಿರುವ ಅಲ್ಲಲ್ಲಿ ಪಕ್ಷಿಗಳ ಸಮೂಹವೇ ನೆಲೆಸಿದ್ದು ಸಂತಾನೋತ್ಪತ್ತಿಯಲ್ಲಿ ತೊಡಗಿವೆ. ಜಲಾಶಯದ ಒಳಾವರಣಕ್ಕೆ ತೆರಳಿದಾಗ ಪಕ್ಷಿಗಳ ಚೀಂವ್ಕಾರ. ಅತ್ತಿಂದಿತ್ತ - ಇತ್ತಿಂದತ್ತ ಹಾರಾಡುವ ಮೂಲಕ ತಮ್ಮ ಪರಿವಾರದ ಪಕ್ಷಿಗಳನ್ನು ಕೂಗಿ ಕರೆವ ಪಕ್ಷಿಗಳ ಕಲರವ ನಿಜಕ್ಕೂ ನಯನಮನೋಹರವಾಗಿದೆ.

ನಿರ್ವಹಣೆ ಇಲ್ಲದ ಜಲಾಶಯ

ಕೊಡಗು ಜಿಲ್ಲೆಗೆ ಧಾವಿಸುವ ಪ್ರವಾಸಿಗರ ದಂಡು ಸಾಮಾನ್ಯವಾಗಿ ಸಾಕಾನೆ ಶಿಬಿರ ದುಬಾರೆ ಹಾಗೂ ಚಿಕ್ಲಿಹೊಳೆ ಅವಳಿ ಪ್ರವಾಸಿ ತಾಣಗಳಿಗೆಂದೇ ಹೆಚ್ಚಾಗಿ ಧಾವಿಸುತ್ತಾರೆ. ಆದರೆ ಅತ್ತ ದುಬಾರೆಯ ಕಾವೇರಿ ನದಿಯಲ್ಲೂ ನೀರಿಲ್ಲ. ಇತ್ತ ಚಿಕ್ಲಿಹೊಳೆಯ ಜಲಾಶಯದಲ್ಲೂ ನೀರಿಲ್ಲ. ಹಾಗಾಗಿ ನೋಡುಗ ಪ್ರವಾಸಿಗರ ಪಾಲಿಗೆ ಏನೋ ಒಂಥರ ಅನಾಥ ಪ್ರಜ್ಞೆಯಾಗಿ ಕಾಡಿರುವ ಜಲಾಶಯದಲ್ಲಿ ನೀರಾವರಿ ನಿಗಮದ ಸಿಬ್ಬಂದಿಗಳು ಇಲ್ಲದ ಕಾರಣ ತಂತಿ ಬೇಲಿ ಹಾಗೂ ಕಬ್ಬಿಣದ ಗೇಟನ್ನು ತುಂಡರಿಸಿ ಬೇಲಿಯನ್ನು ದಾಟಿ ಒಳತೆರಳುವ ಪ್ರವಾಸಿಗರ ದಂಡು ಕಂಡುಬರುತ್ತಿದೆ.

ಇನ್ನು ಕೆಲವರು ಜಲಾಶಯದ ಒಡಲಲ್ಲಿ ಕಾಣುವ ಹಿಂದಿನ ಶ್ರದ್ಧಾ ಕೇಂದ್ರ ದೇವಾಲಯದ ಪಳೆಯುಳಿಕೆ ಗಳನ್ನು ಕಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ತೆರಳಿದರೆ, ಇನ್ನು ಕೆಲವರು ಬಟಾಬಯಲಾದ ಜಲಾಶಯದ ವಿಶಾಲ ಪ್ರದೇಶದಲ್ಲಿ ಒಂದು ಸುತ್ತು ಸುತ್ತಾಡಿ ವಿರಮಿಸಲು ಧಾವಿಸುತ್ತಿದ್ದಾರೆ.

ಪುಣ್ಯಕ್ಕೆ ಅಲ್ಲಲ್ಲಿ ನಿಂತ ನೀರಿಗೆ ಸ್ನಾನಕ್ಕಿಳಿಯುವ ಧೈರ್ಯವನ್ನು ಯಾವ ಪ್ರವಾಸಿಗರೂ ಮಾಡದಿರುವುದು ಸಮಾಧಾನದ ಸಂಗತಿ.

- ಕೆ.ಎಸ್. ಮೂರ್ತಿ