ಸೋಮವಾರಪೇಟೆ, ಮಾ. ೩೦: ತಾಲೂಕು ಆಡಳಿತದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಸಂಬAಧ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಗೆ ಹಲವಷ್ಟು ಇಲಾಖಾಧಿಕಾರಿಗಳು ಗೈರಾಗಿದ್ದು, ಇದಕ್ಕೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ತಾಲೂಕು ತಹಶೀಲ್ದಾರ್ ನವೀನ್‌ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಗೆ ಬೆರಳೆಣಿಕೆಯ ಅಧಿಕಾರಿಗಳು ಮಾತ್ರ ಹಾಜರಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದಲಿತ ಪರ ಸಂಘಟನೆಗಳ ಮುಖಂಡರು, ಸಂವಿಧಾನ ಶಿಲ್ಪಿಯ ಜನ್ಮ ದಿನಾಚರಣೆ ಆಚರಿಸುವ ಸಂಬAಧ ಕರೆಯಲಾಗಿರುವ ಸಭೆಗೆ, ಅಧಿಕಾರಿಗಳು ಗೈರಾಗಿರುವುದು ಸರಿಯಲ್ಲ. ಇಂತಹ ನಿರ್ಲಕ್ಷö್ಯತನದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಭೆಗೆ ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡಿದರೆ ಸಾಲದು, ಅವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರತಿ ಬಾರಿಯೂ ಇಂತಹ ಘಟನೆ ನಡೆಯುತ್ತಿದ್ದು, ಮುಂದೆ ಪುನರಾವರ್ತನೆ ಯಾಗಬಾರದು ಎಂದು ಆಗ್ರಹಿಸಿದರು.

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಈ ಬಾರಿ ಸರಳವಾಗಿ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ದಿನಾಚರಣೆಯನ್ನು ಆಚರಿಸುವ ಬಗ್ಗೆ ತಹಶೀಲ್ದಾರ್ ಸಭೆಗೆ ತಿಳಿಸಿದರು.

ಇದಕ್ಕೆ ಒಪ್ಪದ ಮುಖಂಡರು, ರಾಜಕಾರಣಿಗಳು, ರಾಜಕೀಯ ಪಕ್ಷದವರು ಸಾವಿರಾರು ಜನರನ್ನು ಸೇರಿಸಿ ಮೆರವಣಿಗೆ, ಅದ್ದೂರಿ ಕಾರ್ಯಕ್ರಮ ಮಾಡುತ್ತಾರೆ. ಆದರೆ ಸಂವಿಧಾನ ಶಿಲ್ಪಿಯ ದಿನಾಚರಣೆ ಯನ್ನು ಸರಳವಾಗಿ ಆಚರಿಸಬೇಕೇ? ತಾಲೂಕು ಆಡಳಿತದಿಂದ ಸಾಧ್ಯವಾಗದಿದ್ದರೆ ನಾವುಗಳೇ ಮುಂದೆ ನಿಂತು ಅದ್ದೂರಿ ಕಾರ್ಯಕ್ರಮ ಮಾಡುತ್ತೇವೆ ಎಂದು ದಸಂಸ ಭೀಮವಾದದ ಅಧ್ಯಕ್ಷ ಕುಶಾಲನಗರದ ರಾಜು ಹೇಳಿದರು.

ಈ ಹಿಂದೆ ಪಟ್ಟಣದ ಜೇಸೀ ವೇದಿಕೆಯಿಂದ ಮೆರವಣಿಗೆ ತೆರಳಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಉತ್ತಮವಾಗಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಬಾರಿ ಚುನಾವಣೆಯ ಕಾರಣ ನೀಡಿ, ಕಾರ್ಯಕ್ರಮವನ್ನು ಮೊಟಕುಗೊಳಿಸುವುದು ಸರಿಯಲ್ಲ. ಸಂವಿಧಾನ ಇರುವುದರಿಂದಲೇ ಸರ್ಕಾರ, ಸರ್ಕಾರಿ ಅಧಿಕಾರಿಗಳು ಇರುವುದು ಎಂಬುದನ್ನು ಮರೆಯಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸ್ತುತ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಪ್ರತ್ಯೇಕವಾಗಿದ್ದು, ಎರಡೂ ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸಿ ಎಂದು ಮುಖಂಡರು ಸಭೆಗೆ ಸಲಹೆ ನೀಡಿದರು. ಇಂದಿನ ಸಭೆಗೆ ಹಲವಷ್ಟು ಅಧಿಕಾರಿಗಳು ಗೈರಾಗಿರುವ ಹಿನ್ನೆಲೆ ಹೆಚ್ಚಿನ ಚರ್ಚೆ ನಡೆಸದೇ, ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ, ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯ ಸದಸ್ಯ ಹಾಗೂ ದಲಿತ ಸಂಘಟನೆಗಳ ಮುಖಂಡರಾದ ಬಿ.ಈ. ಜಯೇಂದ್ರ, ಟಿ.ಈ. ಸುರೇಶ್, ಹೊನ್ನಪ್ಪ, ಎಸ್.ಕೆ. ಸ್ವಾಮಿ, ಪ್ರತಾಪ್, ಜನಾರ್ದನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.