ವೀರಾಜಪೇಟೆ, ಮಾ. ೩೦: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ವೀರಾಜಪೇಟೆ ಸಮೀಪದ ಅರಮೇರಿ ಗ್ರಾಮದಲ್ಲಿ ನಡೆದಿದೆ.
ಅರಮೇರಿ ಗ್ರಾಮದ ನಿವಾಸಿ ಪೊಯ್ಯೇಟಿರ ನಟೇಶ್ ಕಾಳಪ್ಪ (೫೦) ಕಾಡಾನೆ ದಾಳಿಗೆ ಒಳಗಾದ ವ್ಯಕ್ತಿ.
ನಟೇಶ್ ಕಾಳಪ್ಪ ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಗದ್ದೆಯಲ್ಲಿ ಕಾಡು ಕಡಿಯಲು ತೆರಳಿದ್ದ ಸಂದರ್ಭ ಹಠಾತ್ ಆಗಿ ಮೂರು ಕಾಡಾನೆಗಳು ಗದ್ದೆಗೆ ಲಗ್ಗೆ ಇಟ್ಟಿವೆ. ಹಿಂಡಿನಲ್ಲಿದ್ದ ಎರಡು ಕಾಡಾನೆಗಳು ತೋಟಕ್ಕೆ ಓಡಿವೆ. ಆದರೆ, ಹಿಂಡಿನಿAದ ಬಂದ ಒಂದು ಕಾಡಾನೆ ನಟೇಶ್ ಅವರ ಮೇಲೆ ದಾಳಿ ನಡೆಸಿದೆ. ಪರಿಣಾಮ ನಟೇಶ್ ಅವರ ಬೆನ್ನು ಮೂಳೆ ಮುರಿದಿದೆ. ಘಟನೆಗೆ ಮುನ್ನ ಕಾಫಿ ತೋಟದಲ್ಲಿ ಕಾಡಾನೆಗಳು ದಾಂಧÀಲೆ ನಡೆಸುತಿವೆ ಎಂದು ಗ್ರಾ.ಪಂ. ಸದಸ್ಯೆ ರೇಶಾ ತಿಮ್ಮಯ್ಯ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಆಗಮಿಸುವಷ್ಟರಲ್ಲಿ ಘಟನೆ ಸಂಭವಿಸಿದೆ. ತಕ್ಷಣವೇ ಅರಣ್ಯ ಸಿಬ್ಬಂದಿಗಳು ಗಾಯಾಳು ನಟೇಶ್ ಅವರನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಗಾಯಾಳು ಆರೋಗ್ಯ ಚೇತರಿಕೆ ಕಂಡಿದೆ.