ಕುಶಾಲನಗರ, ಮಾ.೩೦: ಜಿಲ್ಲೆಯ ಎಲ್ಲೆಡೆ ಈ ಬಾರಿ ನೀರಿನ ಕೊರತೆ ಕಂಡು ಬಂದಿದ್ದರೂ, ಹಾರಂಗಿ ಜಲಾಶಯದಲ್ಲಿ ಮಾತ್ರ ಕಳೆದ ಬಾರಿಗಿಂತ ಐದು ಅಡಿಗಳಷ್ಟು ಹೆಚ್ಚಿನ ಪ್ರಮಾಣದ ನೀರಿನ ಸಂಗ್ರಹ ಕಾಣಬಹುದು.
ಅಣೆಕಟ್ಟಿನಲ್ಲಿ ಪ್ರಸಕ್ತ ೩.೨೧ ಟಿಎಂಸಿ ಪ್ರಮಾಣದ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ ೨೮೨೨.೫೯ ಅಡಿಗಳಷ್ಟು ನೀರಿನ ಮಟ್ಟ ಕಂಡುಬAದಿತ್ತು.
ಈ ಬಾರಿ ಜಲಾಶಯದ ನೀರಿನ ಸಂಗ್ರಹ ಮಟ್ಟ ೨೮೨೭.೫೬ ಅಡಿಗಳಷ್ಟಿದೆ. ಇದೀಗ ಜಲಾಶಯಕ್ಕೆ ಹಾರಂಗಿ ನದಿಯ ಜಲಾನಯನ ಪ್ರದೇಶಗಳಿಂದ ೧೯೧ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದೆ.
ನದಿಗೆ ೨೦೦ ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಸಲಾಗಿದೆ. ಕಳೆದ ಮಳೆಗಾಲ ಅವಧಿಯಲ್ಲಿ ಜಲಾಶಯಕ್ಕೆ ಒಟ್ಟು ೨೭.೬೬ ಟಿಎಂಸಿ ನೀರು ಹರಿದು ಬಂದಿದೆ. ಈ ಸಂದರ್ಭ ನದಿಗೆ ೧೮.೯ ಟಿಎಂಸಿ ಹಾಗೂ ಕಾಲುವೆ ಮೂಲಕ ೭.೩ ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಹಾರಂಗಿ ಅಣೆಕಟ್ಟು ಕೆಳಭಾಗದಲ್ಲಿರುವ ನದಿಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಆಗುತ್ತಿದೆ.