ಮಡಿಕೇರಿ, ಮಾ. ೩೦: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮತ್ತೆ ಪಕ್ಷ ಸಂಘಟನೆಗೆ ಧುಮುಕಿದ್ದಾರೆ. ಕಾಂಗ್ರೆಸ್ ಶಾಸಕರ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗುತ್ತಿದೆ. ಬಿಜೆಪಿ ಹೊಸ ಅಧ್ಯಕ್ಷರ ಆಯ್ಕೆಯ ನಂತರ ನೂತನ ಸಮಿತಿ, ವಿವಿಧ ಮಂಡಲಗಳ ಅಧ್ಯಕ್ಷರ ಆಯ್ಕೆ ಮಾಡುವುದರ ಮೂಲಕ ವಿಧಾನಸಭಾ ಚುನಾವಣಾ ಕಹಿ ನೆನಪನ್ನು ಮಾಸಲು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ.

ಆದರೆ ಜೆಡಿಎಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮೌನಕ್ಕೆ ಜಾರಿದ್ದು, ಕೊಡಗು ಜಿಲ್ಲೆಯಲ್ಲಿ ಬಲಿಷ್ಠವಾಗಿದ್ದ ಪಕ್ಷವು ಇದೀಗ ನಾವಿಕನಿಲ್ಲದ ಹಡಗಿನಂತಾಗಿವೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮೈಸೂರು ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು, ನಾಯಕರು ಸೇರಿ ಸಭೆಯನ್ನು ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಳಿಕ ಒಂದು ಸಭೆ ಕೂಡ ನಡೆದಿಲ್ಲ.

ಜೆಡಿಎಸ್ ಪಕ್ಷದ ನಾಯಕರು ಮತ್ತು ಬಹುತೇಕ ಕಾರ್ಯಕರ್ತರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡAತಾಗಿದೆ.

ನೇಮಕವಾಗದ ಅಧ್ಯಕ್ಷ ಸ್ಥಾನ!

ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಬಿ. ಗಣೇಶ್ ಅವರು ರಾಜೀನಾಮೆ ನೀಡಿದ್ದರು. ಕೆ.ಎಂ. ಗಣೇಶ್ ಅವರು ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಆದರೆ ಜಿಲ್ಲೆಯ ಕೆಲ ಮುಖಂಡರ ವಿರೋಧದಿಂದ ಕೆ.ಎಂ.ಬಿ. ಅವರ ಅಧಿಕೃತ ಕಾಂಗ್ರೆಸ್ ಸೇರ್ಪಡೆಗೆ ಇದುವರೆಗೆ ಕಾಲ ಕೂಡಿ ಬಂದಿಲ್ಲ. ಏತನ್ಮಧ್ಯೆ ಕೆ.ಎಂ.ಬಿ. ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಪಟ್ಟ ಕಟ್ಟುವ ಚರ್ಚೆಗಳು ನಡೆದಿತ್ತು. ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನದಿಂದಲೇ, ತೆರವಾದ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಇದುವರೆಗೆ ಕೂಡ ನೂತನ ಅಧ್ಯಕ್ಷರ ನೇಮಕವಾಗಿಲ್ಲ.

ಕಳೆದ ವರ್ಷ ನವೆಂಬರ್ ತಿಂಗಳ ಕೊನೆಯಲ್ಲಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಾಕತ್ತೂರುವಿನ ರೆಸಾರ್ಟ್ವೊಂದರಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರ ಸಭೆಯನ್ನು ಕರೆದು ಪಕ್ಷ ಸಂಘಟಿಸುವAತೆ ನಾಯಕರಿಗೆ ಕರೆ ನೀಡಿದ್ದರು. ಸದ್ಯದಲ್ಲೇ ಜಿಲ್ಲಾಧ್ಯಕ್ಷರ ನೇಮಕ ಮಾಡುತ್ತೇನೆ ಎಂದು ಕೂಡ ಹೇಳಿದ್ದರು.

ನವೆಂಬರ್ ತಿಂಗಳಲ್ಲಿ ನಡೆದ ನಾಯಕರ ಸಭೆಯಲ್ಲಿ ಮಾಜಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಮಹದೇವ್ ಭಾಗವಹಿಸಿದ್ದರು. ಹೆಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿ ನಾಲ್ಕು ತಿಂಗಳು ಕಳೆದರು ಕೂಡ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷರ ನೇಮಕವಾಗಿಲ್ಲ. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ.

ವರಿಷ್ಠರಿಗೂ ಬೇಡವಾದ ಕೊಡಗು ಜೆಡಿಎಸ್!

ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್ ಬಲಿಷ್ಠವಾಗಿ ಬೆಳೆದು ನಿಂತಿತ್ತು. ಮಡಿಕೇರಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೈಪೋಟಿ ನೀಡುತ್ತಾ ಬಂದಿತ್ತು. ಬಿ.ಎ. ಜೀವಿಜಯ ಅವರು ಕಾಂಗ್ರೆಸ್ ಸೇರಿದ ಬಳಿಕವೂ ಕೂಡ ಜೆಡಿಎಸ್ ಪಕ್ಷ ಉತ್ತಮ ರೀತಿಯಲ್ಲಿ ಸಂಘಟನೆಯಾಗುತ್ತಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕೊಡಗು ಜಿಲ್ಲೆಯ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಕಾಣದಂತಹ ಹೀನಾಯ ಸೋಲಿನ ಬಳಿಕ ಜೆಡಿಎಸ್ ಮೌನಕ್ಕೆ ಜಾರಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ರಾಜ್ಯ ಮಟ್ಟದ ಯಾವೊಬ್ಬ ನಾಯಕರು ಕೂಡ ಜಿಲ್ಲೆಗೆ ಭೇಟಿ ನೀಡಿರಲಿಲ್ಲ. ಅದಲ್ಲದೇ ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಭರಿಸಲು ಪಾರ್ಟಿ ಫಂಡ್ ಕೂಡ ನೀಡದೆ ಕೊಡಗು ಜಿಲ್ಲೆಯನ್ನು ಜೆಡಿಎಸ್ ವರಿಷ್ಠರು ಕಡೆಗಣಿಸಿದ್ದರು.

ಪಕ್ಷದ ವರಿಷ್ಠರಿಗೆ ಕೊಡಗಿನ ಜೆಡಿಎಸ್ ಒಂದು ರೀತಿಯಲ್ಲಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಾಗಿ ಬಿಟ್ಟಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು.

ಮಡಿಕೇರಿ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪನವರು ಸೋಲಿನ ಬಳಿಕ ರಾಜಕೀಯದಿಂದ ದೂರ ಉಳಿದಿದ್ದಾರೆ. ಅಲ್ಲದೇ ಜೆಡಿಎಸ್ ಪಕ್ಷದಿಂದ ಅಂತರವನ್ನು ಕೂಡ ಕಾಯ್ದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಶೇಷ ದಿನಗಳಿಗೆ ಜೆಡಿಎಸ್ ಮುಖಂಡ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಶುಭಕೋರುವ ಪೋಸ್ಟರ್ ಹಾಕುವುದು ಬಿಟ್ಟರೆ, ಬೇರೆ ಯಾವುದೇ ಬಹಿರಂಗ ವೇದಿಕೆಯಲ್ಲಿ ನಾಪಂಡ ಮುತ್ತಪ್ಪನವರು ಕಾಣಿಸಿಕೊಳ್ಳುತ್ತಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗುತ್ತಿದ್ದಂತೆ ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿ ಎಂ.ಎ. ಮನ್ಸೂರ್ ಆಲಿ, ಅವರು ಕೂಡ ಜೆಡಿಎಸ್‌ನಿಂದ ದೂರಸರಿದಿದ್ದಾರೆ.

ಅದಲ್ಲದೇ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಾಸೀರ್ ಮೂರ್ನಾಡು, ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಿ.ಎಂ. ಮಂಜುನಾಥ್ ಸೇರಿ ಬಹುತೇಕ ನಾಯಕರು ಮೌನಕ್ಕೆ ಜಾರಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಿರಾಸಕ್ತಿ!

ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಬಿಜೆಪಿಯೊಂದಿಗಿನ ಮೈತ್ರಿಯಿಂದ ಜಿಲ್ಲೆಯಲ್ಲಿ ಕಾರ್ಯಕರ್ತರು ಪಕ್ಷದಿಂದ ದೂರವಾಗುತ್ತಿದ್ದಾರೆ ಎಂಬ ಅಭಿಪ್ರಾಯ ಜೆಡಿಎಸ್ ಹಿರಿಯ ನಾಯಕರಲ್ಲಿ ವ್ಯಕ್ತವಾಗಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದ ಅಲ್ಪಸಂಖ್ಯಾತರು ಇದೀಗ ಬಿಜೆಪಿಯೊಂದಿಗಿನ ಮೈತ್ರಿಯಿಂದ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದತ್ತ ಮುಖಮಾಡಿದ್ದಾರೆ. ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ವೀರಾಜಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಪಿ.ಎಂ. ಮಂಜುನಾಥ್ ಆಕಾಂಕ್ಷಿಗಳಾಗಿದ್ದರು. ಇವರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇದುವರೆಗೆ ಜಿಲ್ಲಾಧ್ಯಕ್ಷರ ನೇಮಕವಾಗಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಯಾರು ಕೂಡ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಮುಂದಾಗುವುದು ಅನುಮಾನವೆನಿಸಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ