ಗೋಣಿಕೊಪ್ಪಲು, ಮಾ. ೩೦: ಸ್ವಂತ ತಮ್ಮನ ಮೇಲೆ ಅಣ್ಣ ಗುಂಡಿನ ದಾಳಿ ನಡೆಸಿ ಕೊಲೆಗೈದಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಬೇಗೂರು ಬಳಿ ನಡೆದಿದೆ.
ಮಲ್ಲಂಡ ಪ್ರಕಾಶ್ (೫೭) ಮೃತ ದುರ್ದೈವಿ. ಪ್ರಕಾಶ್ ಮಗ ಧ್ಯಾನ್ ದೇವಯ್ಯನ ಭುಜದ ಭಾಗಕ್ಕೆ ಗುಂಡು ತಗುಲಿ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಸಹೋದರ ಸುಬ್ರಮಣಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಶೋಧ ಮುಂದುವರೆದಿದೆ.
ಮಲ್ಲಂಡ ಪ್ರಕಾಶ್ ಮೇಲೆ ಅಣ್ಣ ಸುಬ್ರಮಣಿ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ಪ್ರಕಾಶ್ ಪತ್ನಿ ನೇತ್ರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಅನ್ವಯ ಪೊನ್ನಂಪೇಟೆ ಪೊಲೀಸರು ಆರೋಪಿ ಸುಬ್ರಮಣಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಇಲಾಖೆಯ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸೇರಿದಂತೆ ವೀರಾಜಪೇಟೆ ಡಿವೈಎಸ್ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್ ಪೊನ್ನಂಪೇಟೆ ಎಸ್.ಐ. ನವೀನ್ ಹಾಗೂ ತಂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತು. ಆರೋಪಿ ಕಾಫಿ ತೋಟದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿ ಸೆರೆಗೆ ಪ್ರಯತ್ನ ನಡೆಸಿದರು. ಕಾಫಿ ತೋಟ ಹಾಗೂ ಮನೆಯಲ್ಲಿ ಹುಡುಕಾಟ ನಡೆಸಿದರೂ ಆರೋಪಿಯ ಸುಳಿವು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಸಹೋದರರ ನಡುವೆ ಆಸ್ತಿ ವಿಚಾರದಲ್ಲಿ ಆಗಿಂದಾಗ್ಗೆ ಮಾತಿನ ಚಕಮಕಿ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.
ದುರ್ಘಟನೆ ಮುನ್ನ ಸಹೋದರರ ನಡುವೆ ತೀವ್ರ ಸ್ವರೂಪದ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದೆ. ನಂತರ ಮನೆಗೆ ತೆರಳಿದ ಆರೋಪಿ ಸುಬ್ರಮಣ್ಯ ಬಂದೂಕಿನೊAದಿಗೆ ಆಗಮಿಸಿ, ಮನೆಯ ಗೇಟ್ ಬಳಿಯೇ ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿಯೇ ಪ್ರಕಾಶ್ ಮೃತಪಟ್ಟಿದ್ದಾರೆೆ.
(ಮೊದಲ ಪುಟದಿಂದ) ನಂತರ ತೋಟದ ಕಾರ್ಮಿಕರು ಮೃತಪಟ್ಟ ಪ್ರಕಾಶ್‌ನನ್ನು ಜೀಪಿನಲ್ಲಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರು.
ಪ್ರಕಾಶ್ ಮೇಲೆ ಗುಂಡಿನ ದಾಳಿ ನಡೆಸಿದ ಸಂದರ್ಭ ಪ್ರಕಾಶ್‌ನ ಮಗ ಧ್ಯಾನ್ ದೇವಯ್ಯನ ಭುಜಕ್ಕೂ ಗುಂಡೇಟು ತಗುಲಿದೆ. ಈ ವೇಳೆ ಬಂದೂಕಿನೊAದಿಗೆ ಸ್ಥಳದಲ್ಲಿದ್ದ ಆರೋಪಿ ಸುಬ್ರಮಣಿ ಎಚ್ಚೆತ್ತುಕೊಂಡು ತನ್ನ ಕಾರಿನಲ್ಲಿಯೇ ಪ್ರಕಾಶ್ ಮಗನನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನವನ್ನು ಮಾಡಿ ನಂತರ ಪರಾರಿಯಾಗಿದ್ದಾನೆ.
ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ನಂತರ ಧ್ಯಾನ್ ದೇವಯ್ಯ ಚೇತರಿಕೆ ಕಾಣುತ್ತಿದ್ದಾನೆ.
ತೋಟಕ್ಕೆ ತೆರಳಿದಾಗ ಘಟನೆ
ಬೇಗೂರು ಗ್ರಾಮದಲ್ಲಿರುವ ಕಾಫಿ ತೋಟಕ್ಕೆ ಮಲ್ಲಂಡ ಪ್ರಕಾಶ್ ಎಂದಿನAತೆ ತಮ್ಮ ಜೀಪಿನಲ್ಲಿ ಶನಿವಾರ ಬೆಳಿಗ್ಗೆ ತೆರಳಿದ್ದರು. ಈ ವೇಳೆ ಅಣ್ಣನಾದ ಸುಬ್ರಮಣಿ ತೋಟದ ದಾರಿಯಲ್ಲಿ ಎದುರು ಸಿಕ್ಕಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಮಾತು ವಿಕೋಪಕ್ಕೆ ತೆರಳುತ್ತಿದ್ದಂತೆಯೇ ಸಮೀಪದ ಮನೆಗೆ ತೆರಳಿದ ಸುಬ್ರಮಣಿ ಬಂದೂಕಿ ನೊಂದಿಗೆ ಆಗಮಿಸಿ ಮನೆಯ ಗೇಟಿನ ಬಳಿಯೇ ತಮ್ಮ ಪ್ರಕಾಶ್ ಇರುವುದನ್ನು ನೋಡಿ ತನ್ನ ಬಂದೂಕಿನಿAದ ಗುಂಡು ಹಾರಿಸಿದ್ದಾರೆ. ಘಟನೆಗೆ ನಿಖರ ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಆಸ್ತಿ ವೈಷಮ್ಯ ಕೊಲೆಗೆ ಕಾರಣ ಎಂದು ಅನುಮಾನ ವ್ಯಕ್ತವಾಗಿದೆ. ಮೃತ ಪ್ರಕಾಶ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ದಿ. ಮಲ್ಲಂಡ ನಂಜಪ್ಪ ಅವರ ಪುತ್ರನಾಗಿದ್ದು, ಅರುವತ್ತೊಕ್ಕಲು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಗೋಣಿಕೊಪ್ಪಲುವಿನ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷರಾಗಿ ದುಡಿದಿದ್ದಾರೆ. ಇತ್ತೀಚಿಗೆ ಬೇಗೂರು ಗ್ರಾಮದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಮಹಾವಿಷ್ಣು ದೇವಾಲಯದ ಅಧ್ಯಕ್ಷರಾಗಿ, ಇದರ ಜೀರ್ಣೋದ್ಧಾರ ಮಾಡುವ ಮೂಲಕ ದೇವರ ಪ್ರತಿಷ್ಠಾಪನೆಗೆ ಶ್ರಮಿಸಿದ್ದರು.
ಆರೋಪಿ ಸುಬ್ರಮಣಿ ಸಾಗರ್ ಆಟೋಮೊಬೈಲ್ಸ್ನಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಬೆಂಗಳೂರಿನಲ್ಲಿ ನೆಲೆಸಿದ್ದರು. ಆಗಿಂದಾಗ್ಗೆ ಬೇಗೂರಿಗೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ಒದಗಿಸಿದ್ದಾರೆ.
ಶಾಸಕರ ದೌಡು : ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಬೇಗೂರಿಗೆ ಆಗಮಿಸಿದ ಶಾಸಕ ಎ.ಎಸ್. ಪೊನ್ನಣ್ಣ ಸಂತಾಪ ಸೂಚಿಸಿದರು. ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು. ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕ ಪೊನ್ನಣ್ಣನವರೊಂದಿಗೆ ಮಾಜಿ ಎಂ.ಎಲ್.ಸಿ. ವೀಣಾ ಅಚ್ಚಯ್ಯ, ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮೈಸೂರಿನ ಡಾ. ಶುಶ್ರೂತ್ ಗೌಡ ಮುಖಂಡರುಗಳಾದ ಕೊಲ್ಲೀರÀ ಬೋಪಣ್ಣ, ಅಣ್ಣೀರ ಹರೀಶ್, ಕೊಲ್ಲೀರ ಗಯಾ, ಉಮೇಶ್, ಮತ್ರಂಡ ದಿಲ್ಲು, ಕಡೆಮಾಡ ಕುಸುಮ, ಅಪ್ಪಚ್ಚಂಗಡ ಮೋಟಯ್ಯ, ಟಾಟು ಮೊಣ್ಣಪ್ಪ, ನರೇನ್ ಕಾರ್ಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.
- ಹೆಚ್.ಕೆ. ಜಗದೀಶ್