ಮಡಿಕೇರಿ, ಮಾ. ೩೦: ‘ನಾವಿಕನಿಲ್ಲದ ಹಡಗು’ ಎಂಬAತಹ ಸ್ಥಿತಿಯಲ್ಲಿರುವ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷಕ್ಕೆ ಲೋಕಸಭೆ ಚುನಾವಣೆಯ ನಂತರವೇ ಜಿಲ್ಲಾಧ್ಯಕ್ಷನನ್ನು ನೇಮಿಸಲಾಗುವುದು ಎಂದು ಜೆಡಿಎಸ್ ಕೊಡಗು ಚುನಾವಣಾ ಉಸ್ತುವಾರಿ ಸಾ.ರಾ. ಮಹೇಶ್ ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾಧ್ಯಕ್ಷ ಆಯ್ಕೆ ಕುರಿತು ಮುಖಂಡರುಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕೊಂಡರು.

ಬಳಿಕ ಮಾತನಾಡಿದ ಅವರು, ದೇಶದ ಉಳಿವಿಗೆ ವರಿಷ್ಠರ ನಿರ್ಧಾರದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಮೈತ್ರಿಯಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ನಾವು ಬೆಂಬಲಿಸಬೇಕು. ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗೆ ಒಂದಾಗಬೇಕು. ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ಬಿಜೆಪಿ ಜೊತೆ ಜೆಡಿಎಸ್ ಕಾರ್ಯಕರ್ತರಿಗೆ ಕಡಿಮೆ ಪ್ರಮಾಣದಲ್ಲಿ ಭಿನ್ನಾಭಿ ಪ್ರಾಯವಿದೆ. ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರ ಸಹಕಾರ ಅತೀ ಮುಖ್ಯ. ‘ವಿಸಿಟಿಂಗ್ ಕಾರ್ಡ್’ನಲ್ಲಿ ಹುದ್ದೆ ಹಾಕಿಕೊಳ್ಳಲು ಅಧ್ಯಕ್ಷರಾಗಬೇಡಿ. ತಾಲೂಕು ಮಟ್ಟದಲ್ಲಿ ಘಟಕದ ಪದಾಧಿಕಾರಿಗಳ ಪಟ್ಟಿ ಕಳುಹಿಸುವಂತೆ ಸೂಚಿಸಿದ ಸಾ.ರಾ. ಮಹೇಶ್, ಸಮಯ ಕೊಟ್ಟು ಪಕ್ಷಕ್ಕೆ ಶ್ರಮಿಸುವವರನ್ನು ಪದಾಧಿಕಾರಿ ಮಾಡುವಂತೆ ಸೂಚನೆ ನೀಡಿದರು.

ಈ ಮೈತ್ರಿಯಿಂದ ಅಲ್ಪ ಸಂಖ್ಯಾತರಿಗೆ

(ಮೊದಲ ಪುಟದಿಂದ) ತೊಂದರೆಯಾಗುವುದಿಲ್ಲ ಎಂದು ಕಾರ್ಯಕರ್ತರು ಮತದಾರರಿಗೆ ತಿಳಿ ಹೇಳಬೇಕು. ಮೈತ್ರಿ ಜೊತೆ ನಾವಿರುವುದರಿಂದ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಾರಿ ಒಂದಾಗಿರುವ ಕಾರಣ ದೊಡ್ಡ ಮಟ್ಟದ ಬಹುಮತ ನಿಶ್ಚಿತ ಎಂದು ಭವಿಷ್ಯ ನುಡಿದ ಮಹೇಶ್, ಲೋಕಸಭೆ ಚುನಾವಣೆ ತನಕ ಅಧ್ಯಕ್ಷ ಅಂತಿಮಗೊಳಿಸುವುದಿಲ್ಲ. ಕೋರ್ ಕಮಿಟಿ ಹಾಗೂ ಸಮನ್ವಯ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ. ಚುನಾವಣೆ ಮುಗಿದ ೧೫ ದಿನಗಳಲ್ಲಿ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳನ್ನು ಅಂತಿಮಗೊಳಿಸಬೇಕು. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುವುದು ಎಂದು ತಾಕೀತು ಮಾಡಿದರು.

ಗೆಲುವಿಗೆ ಶ್ರಮಿಸುವಂತೆ ಜಿ.ಟಿ.ಡಿ. ಕರೆ

ಗೊಂದಲ, ಭಿನ್ನಾಭಿಪ್ರಾಯ ಗಳನ್ನು ದೂರವಿಟ್ಟು ಮೈತ್ರಿ ಅಭ್ಯರ್ಥಿ ಯದುವೀರ ಒಡೆಯರ್ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವಂತೆ ಕೋರ್ ಕಮಿಟಿ ಅಧ್ಯಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.

ಕೊಡಗಿನಲ್ಲಿ ಜನತಾ ಪರಿವಾರದ ನಾಯಕರು ಅನೇಕರಿದ್ದು, ಜಿಲ್ಲೆಯಲ್ಲಿ ಜೆಡಿಎಸ್‌ನ ಬೇರು ಗಟ್ಟಿಯಾಗಿದೆ. ಅನಿವಾರ್ಯ ಕಾರಣದಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಚುನಾವಣಾ ಸಂದರ್ಭ ಬಂದು ಟಿಕೆಟ್ ಪಡೆದು ಪಕ್ಷ ಬಿಟ್ಟು ತೆರಳುತ್ತಾರೆ. ಇವೆಲ್ಲ ಕಾರಣಗಳು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಪಕ್ಷದ ಕಾರ್ಯಕರ್ತರು ಹೇಳುವವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸುತ್ತೇವೆ. ಎಲ್ಲರೂ ಅಧ್ಯಕ್ಷರಾಗಲು ಆಗುವುದಿಲ್ಲ. ಕಾರ್ಯಕರ್ತರ ಒಲವಿರುವವರು ಅಧ್ಯಕ್ಷರಾಗುತ್ತಾರೆ. ಈ ಹಿಂದೆಯೂ ಮೈತ್ರಿ ಇಲ್ಲದ ವೇಳೆ ಪ್ರತಾಪ್ ಸಿಂಹ ಅವರನ್ನು ಜೆಡಿಎಸ್ ಬೆಂಬಲಿಸಿದೆ. ರಾಜ್ಯ ಸರಕಾರದ ದುರಾಡಳಿತದಿಂದ ಅಭಿವೃದ್ಧಿ ಹಿನ್ನಡೆಯಾಗಿದೆ. ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದ ಸರಕಾರ ಇದಾಗಿದೆ ಎಂದು ಟೀಕಿಸಿದ ಜಿ.ಟಿ.ದೇವೇಗೌಡ, ಮೈಸೂರು ಒಡೆಯರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಯದುವೀರ್ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಾರ, ಮಂಡ್ಯ, ಹಾಸನ ಕ್ಷೇತ್ರ ನಮಗೆ ಬಿಟ್ಟುಕೊಟ್ಟಿದ್ದಾರೆ. ೨೮ ಕ್ಷೇತ್ರದಲ್ಲಿ ಗೆಲ್ಲಬೇಕು. ಜನರ ಬೆಂಬಲ ಮೈತ್ರಿಗಿದೆ. ನರೇಂದ್ರ ಮೋದಿ ಅವರನ್ನು ಮತ್ತೇ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಯುವ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಿ.ಎಲ್ ವಿಶ್ವ ಮಾತನಾಡಿ, ಕಳೆದ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ನಡೆದಿದೆ. ಸೈದ್ಧಾಂತಿಕ ಬಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಯದುವೀರ್ ಒಡೆಯರ್ ಗೆಲುವಿಗೆ ಒಂದಾಗಿ ಶ್ರಮಿಸುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅನೇಕ ಕೊಡುಗೆ ನೀಡಿದ್ದಾರೆ. ವಲಸೆ ಬಂದ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ನೀಡುವುದು ಬೇಡ ಎಂದು ಮನವಿ ಮಾಡಿದರು.

ಹಿರಿಯ ಮುಖಂಡ ಸುರೇಶ್ ಮಾತನಾಡಿ, ಪಕ್ಷ ಬಲಾಡ್ಯವಾಗಿರುವ ಕಡೆಯ ಆಕಾಂಕ್ಷಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದರು.

ಆಕಾಂಕ್ಷಿಗಳಿಗೆ ‘ಟಾರ್ಗೆಟ್’ ನೀಡಿ

ಬಣ ರಾಜಕಾರಣದಿಂದ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಹುದ್ದೆಗಾಗಿ ಪಕ್ಷದಲ್ಲಿರುವವರು ಇದ್ದಾರೆ. ವರಿಷ್ಠರು ನಿರ್ಧರಿಸಿ ಜಿಲ್ಲಾಧ್ಯಕ್ಷ ಹೆಸರು ಘೋಷಿಸುವವರಿಗೆ ಕಾರ್ಯಕರ್ತರು ಹಾಗೂ ನಾಯಕರ ಸಹಕಾÀರ ಬೇಕಿದೆ. ಕೊನೆ ಘಳಿಗೆಯಲ್ಲಿ ಘೋಷಣೆಯಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಗೆ ಟಾರ್ಗೆಟ್ ನೀಡಿ. ಅದನ್ನು ಪೂರ್ಣ ಗೊಳಿಸುವವರಿಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಕೆಲ ಕಾರ್ಯಕರ್ತರು ನಾಯಕರಿಗೆ ಸಲಹೆ ನೀಡಿದರು.

ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಶೀರ್ ಮಾತನಾಡಿ, ಸೈದ್ಧಾಂತಿಕ ವಿರೋಧವಿದ್ದರು ಅಲ್ಪಸಂಖ್ಯಾತರು ಪಕ್ಷ ಬಿಟ್ಟು ಹೋಗುವುದಿಲ್ಲ. ‘ಲೀಡ್’ ನೀಡುವವರಿಗೆ ಸ್ಥಾನ ನೀಡಿ ಎಂದು ಹೇಳಿದರು. ಪ್ರವೀಣ್ ಗೌಡ ಮಾತನಾಡಿ, ಚುನಾವಣೆ ನಂತರ ಜಿಲ್ಲಾಧ್ಯಕ್ಷ ಆಯ್ಕೆ ಸರಿಯಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧರಿದ್ದೇವೆ. ಜಿಲ್ಲಾಧ್ಯಕ್ಷನಿಲ್ಲದೆ ಪಕ್ಷ ಮುನ್ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಸಂತ್ ಮಾತನಾಡಿ, ಸೋಮವಾರಪೇಟೆ ಭಾಗದಿಂದ ಉತ್ತಮ ‘ಲೀಡ್’ ನೀಡಲಾಗುತ್ತದೆ. ಸೋಮವಾರಪೇಟೆ ಭಾಗದವರಿಗೆ ಅಧ್ಯಕ್ಷ ಸ್ಥಾನ ನೀಡಿ ಎಂದರು.

ಅಬ್ಬೂರು ಕಟ್ಟೆ ಗ್ರಾ.ಪಂ. ಸದಸ್ಯ ಸಂಭ್ರಮ್ ಮಾತನಾಡಿ, ನಮ್ಮ ಗ್ರಾ.ಪಂನಲ್ಲಿ ೬ ಜೆಡಿಎಸ್ ಬೆಂಬಲಿತರಿದ್ದು, ಸೋಮವಾರ ಪೇಟೆಯಲ್ಲಿ ಬಲಶಾಲಿಯಾಗಿದ್ದು, ಪ್ರವೀಣ್ ಅವರಿಗೆ ಸ್ಥಾನ ನೀಡುವಂತೆ ಆಗ್ರಹಿಸಿದರು.

ಸೋಮವಾರಪೇಟೆ ತಾಲೂಕು ಅಧ್ಯಕ್ಷ ನಾಗರಾಜ್ ಮಾತನಾಡಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.