ಕೊಡಗು ಪ್ರವಾಸಿ ತಾಣಗಳನ್ನಷ್ಟೇ ಅಲ್ಲದೆ ಹಲವಾರು ದೈವ ದೇವಸ್ಥಾನಗಳು ವಿಶಿಷ್ಟ ವಾಸ್ತು ಶೈಲಿಯಲ್ಲಿ ಹಲವು ಗ್ರಾಮಗಳಲ್ಲಿ ಗ್ರಾಮ ದೇವಸ್ಥಾನಗಳಾಗಿ ನೆಲೆ ಹೊಂದಿದೆ. ಹಿಂದಿನ ಕಾಲದಿಂದಲೂ ನಡೆದು ಬಂದ ಪದ್ಧತಿ, ಪಾರಂಪರಿಕತೆಗೆ ಅನುಗುಣವಾಗಿ ಆಯಾಯ ಗ್ರಾಮಗಳಲ್ಲಿ ಹಲವು ದೇವರುಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಕೊಡಗಿನ ಜನರು ತಮ್ಮ ಕುಲದೇವರಾದ ಭಾಗಮಂಡಲ ಶ್ರೀ ಭಗಂಡೇಶ್ವರ ತಲಕಾವೇರಿ ಮತ್ತು ಪಾಡಿ ಶ್ರೀ ಇಗ್ಗುತಪ್ಪ ದೇವರುಗಳ ನಂತರ ಹೆಚ್ಚು ಪ್ರಾಮುಖ್ಯತೆ ನೀಡುವುದು ತಮ್ಮ ಗ್ರಾಮ ದೇವರುಗಳಿಗೆ. ಈಗ ಕೊಡಗು ಜಿಲ್ಲೆಯಲ್ಲಿ ಗ್ರಾಮ ದೇವರುಗಳ ಉತ್ಸವಗಳ ಪರ್ವ, ಗ್ರಾಮಗಳಲ್ಲಿ ವರ್ಷಂಪ್ರತಿ ಉತ್ಸವಗಳು ೧೦ ದಿನ, ೭ ದಿನ, ೫ ದಿನ ಅಥವಾ ೩ ದಿನ ಹೀಗೆ ಆ ಊರಿನ ಪದ್ಧತಿಯಂತೆ ನಡೆಯುತ್ತದೆ. ಉತ್ಸವಗಳಲ್ಲಿ ದೇವರಿಗೆ ಮಹಾಪೂಜೆ, ಎತ್ತು ಪೋರಾಟ, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ತೆಂಗಿನಕಾಯಿ ಕೀಳುವುದು, ಬೋಡ್ ನಮ್ಮೆ ಇತ್ಯಾದಿ ನಡೆಯುತ್ತದೆ. ಇದರೊಂದಿಗೆ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೀಡುವುದು ವಿಶೇಷ. ಹಲವಾರು ದಾನಿಗಳು, ಗ್ರಾಮಸ್ಥರು, ಆಡಳಿತ ಮಂಡಳಿಯವರು, ತಕ್ಕ ಮುಖ್ಯಸ್ಥರು, ಅರ್ಚಕ ವೃಂದದವರು, ಎಲ್ಲರ ಒಗ್ಗೂಡಿಕೆಯಿಂದ ಗ್ರಾಮ ದೇವರುಗಳ ಉತ್ಸವಗಳು ವಿಜೃಂಭಣೆಯಿAದ ನಡೆಯುತ್ತವೆ.
ಉತ್ಸವಗಳಲ್ಲಿ ದೇವರು ಹೊರಗೆ ಬಂದು ದರ್ಶನ ನೀಡುವುದು ಇನ್ನೊಂದು ವಿಶೇಷ ಪದ್ಧತಿ. ದೇವರ ಉತ್ಸವ ಮೂರ್ತಿಯನ್ನು ಶಿರದಲ್ಲಿ ಇರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಮಾಡುತ್ತಾ ನೃತ್ಯ ಮಾಡುವುದು ನಮ್ಮ ಕೊಡಗಿನ ದೇವಸ್ಥಾನಗಳಲ್ಲಿ ಕಾಣಬಹುದು. ಈ ರೀತಿಯ ಉತ್ಸವವು ಕೊಡಗಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಮತ್ತು ಕೇರಳ ರಾಜ್ಯದ ಕೆಲವು ದೇವಸ್ಥಾನಗಳಲ್ಲಿ ಕಂಡುಬರುತ್ತದೆ. ಈ ರೀತಿಯ ನೃತ್ಯ ಮಾಡಿ ದೇವರನ್ನು ಹೊರುವವರನ್ನು ಸಂಸ್ಕೃತದಲ್ಲಿ ಬ್ರಹ್ಮವಾಹಕ ಎಂದು ಕರೆಯಲಾಗುತ್ತದೆ.
ದೇವರ ಉತ್ಸವದ ಸಮಯದಲ್ಲಿ ಪೂಜಾ ಕೈಂಕರ್ಯಗಳನ್ನು ತಂತ್ರಿಗಳು ನೆರವೇರಿಸುತ್ತಾರೆ. ದೇವರನ್ನು ಹೊತ್ತು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಬರುವುದಕ್ಕೆ ಬಲಿ ಎಂದು ಕರೆಯಲಾಗುತ್ತದೆ. ಬೆಳಗ್ಗಿನ ಜಾವ ಮತ್ತು ಸಂಜೆಯ ಸಮಯದಲ್ಲಿ ದೇವರ ಬಲಿ ಇರುತ್ತದೆ, ಮೊದಲ ಸುತ್ತಿನ ಪ್ರದಕ್ಷಿಣೆಗೆ ದರ್ಶನ ಬಲಿ ಎಂದು ಹೇಳುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ದಿನನಿತ್ಯ ನಡೆಯುವ ಬಲಿಗೆ ನಿತ್ಯ ಬಲಿ ಎಂದು ಕರೆಯಲಾಗುತ್ತದೆ. ಭೂತಬಲಿ, ನೀರು ಬಲಿ, ಪೇಟೆ ಮೆರವಣಿಗೆಗಳು ಆಯಾ ದೇವಸ್ಥಾನಗಳ ಸಂಪ್ರದಾಯಕ್ಕೆ ಅನುಗುಣವಾಗಿ ಇರುತ್ತದೆ.
ದೇವರ ನೃತ್ಯ ಬಲಿಯು ಚಂಡೆನಾದ ಹಾಗೂ ಡೋಲಿನ ತಾಳಕ್ಕೆ ಸರಿಯಾಗಿ ಇರುತ್ತದೆ. ದೇವರು ಹೊರುವವರು ಮಡಿ ಬಟ್ಟೆ, ತಲೆಗೆ ಮುಂಡಾಸು ಹಾಗೂ ಬ್ರಹ್ಮವಸ್ತç ಧರಿಸಿರುತ್ತಾರೆ. ಬ್ರಹ್ಮವಾಹಕರನ್ನು ವಿಶಿಷ್ಟ ಉಡುಪಿನಲ್ಲಿ ನೋಡಿದಾಗ ದೇವರನ್ನೇ ನೋಡಿದಂತಾಗುತ್ತದೆ. ಉತ್ಸವ ಮೂರ್ತಿ ಶಿರದಲ್ಲಿ ಇರುವಾಗ ಬ್ರಹ್ಮವಾಹಕರು ಮಾತನಾಡುವಂತಿಲ್ಲ. ಯಾವುದೇ ರೀತಿಯ ಕೋಪ ಸಿಟ್ಟುಗಳನ್ನು ತೋರಿಸುವಂತಿಲ್ಲ, ಮಂದಸ್ಮಿತ ಮತ್ತು ಗಾಂಭೀರ್ಯದಿAದ ನೃತ್ಯ ಮಾಡುತ್ತಾರೆ. ನಮ್ಮ ಕೊಡಗಿನ ನೃತ್ಯ ಶೈಲಿಯಲ್ಲಿ ೧೬ ತರಹದ ತಾಳಗಳಿವೆ. ಆಯಾ ದೇವಸ್ಥಾನಗಳ ಸಂಪ್ರದಾಯದAತೆ ಸುತ್ತುಗಳು ನಿರ್ಧಾರವಾಗುತ್ತದೆ. ಅಲಂಕಾರವನ್ನು ಹೂಗಳಿಂದ ಅಚ್ಚುಕಟ್ಟಾಗಿ ಮಾಡಿ ಉತ್ಸವ ಮೂರ್ತಿಗೆ ಪುಷ್ಪ ಕನ್ನಡಿ (ತಡಂಬು) ಜೋಡಿಸಲಾಗುತ್ತದೆ. ಇಷ್ಟು ಕೆಲಸಗಳು ದೇವರು ಹೊರುವವರದ್ದೇ ಆಗಿರುತ್ತದೆ. ಹಿಂದೆ ಕೆಂಪು ಬಟ್ಟೆಗಳಲ್ಲಿ ಇದ್ದ ಪುಷ್ಪಕನ್ನಡಿಯು ಈಗ ಹೆಚ್ಚಾಗಿ ಬೆಳ್ಳಿಯಲ್ಲಿ ಇದೆ. ದೇವರು ಹೊರುವವರು ಸಕಾರಾತ್ಮಕ ಚಿಂತನೆಯನ್ನು, ನಿತ್ಯ ಅನುಷ್ಠಾನಗಳನ್ನು ದೇವರ ಕೆಲಸ ಎಂಬ ಒಳ್ಳೆಯ ಭಾವನೆಗಳಿಂದ ಮಾಡುತ್ತಾರೆ.
ದೇವರನ್ನು ಹೊತ್ತು ೧೧ ಸುತ್ತುಗಳನ್ನು ನೃತ್ಯ ಮಾಡುವುದು ಸುಲಭದ ಮಾತಲ್ಲ ಹಲವು ಗಂಟೆಗಳ ಕಾಲ ಭಂಡಾರಕ್ಕಾಗಿ ನಿಂತು ಆಯಾಸವಾದರೂ ಕಾಣಿಸದಂತೆ ಇರುತ್ತಾರೆ. ದೇವರ ಅನುಗ್ರಹದಿಂದ ತಲೆಯ ಮೇಲೆ ಭಾರವು ಅನುಭವಕ್ಕೆ ಬರುವುದಿಲ್ಲ ಎಂದು ಅನುಭವೀ ಬ್ರಹ್ಮವಾಹಕರು ಹೇಳುತ್ತಾರೆ. ದೇವಸ್ಥಾನದ ಅಂಗಳದಲ್ಲಿ ಒಂದು ಸುತ್ತು ಬರಲು ಸುಮಾರು ೧೫ ನಿಮಿಷಗಳಾದರೂ ಬೇಕಾಗುತ್ತದೆ. ದೇವರು ಹೊರುವವರು ಮೊದಮೊದಲು ಸಣ್ಣ ಬಲಿ ಮೂರ್ತಿ ಹೊತ್ತು, ನಂತರ ಪುಷ್ಪ ಕನ್ನಡಿಯೊಂದಿಗೆ ಹೊತ್ತು ಪ್ರಾರಂಭಿಸುತ್ತಾರೆ. ದೇವರ ಅವಭೃಥ ಸ್ನಾನದ ನಂತರದ ಆರಾಟು ಬಲಿ ಹೊರುವಷ್ಟು ಅಭ್ಯಾಸವಾಗಿರುತ್ತದೆ.
ಕೊಡಗಿನ ಪ್ರಖ್ಯಾತ ಬ್ರಹ್ಮವಾಹಕರ ಪರಿಚಯ
ಶ್ರೀ ಸತ್ಯಮೂರ್ತಿ ಸರಳಾಯ
ಗೋಪಾಲಕೃಷ್ಣ ಸರಳಾಯ ಮತ್ತು ಗಿರಿಜಾ ದಂಪತಿ ಪುತ್ರನಾಗಿ ೧೯೭೬ ಜುಲೈ ೧ರಂದು ವೀರಾಜಪೇಟೆಯಲ್ಲಿ ಜನಿಸುತ್ತಾರೆ. ಯಾವ ಗುರುಗಳಿಲ್ಲದೆ ಏಕಲವ್ಯನ ರೀತಿಯಲ್ಲಿ ನೃತ್ಯವನ್ನು ನೋಡಿ ಕಲಿತು ಪ್ರಪ್ರಥಮವಾಗಿ ೧೯೯೬ನೇ ಇಸವಿಯಲ್ಲಿ ನಾಪೋಕ್ಲು ಸಮೀಪದ ಬಾವಲಿಯಲ್ಲಿ ಮೊದಲು ದೇವರನ್ನು ಹೊರುತ್ತಾರೆ. ಅಲ್ಲಿಂದ ಸುಮಾರು ೬೦ ದೇವಸ್ಥಾನಗಳಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ದೇವರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಬಿರುನಾಣಿಯ ಶ್ರೀ ಪುತ್ತು ಭಗವತಿ, ಕಟ್ಟೆಮಾಡುವಿನ ಶ್ರೀ ಭದ್ರಕಾಳಿ, ಪಾಲೂರು ಶ್ರೀ ಮಹಾಲಿಂಗೇಶ್ವರ ಹಾಗೂ ಇತರ ಪ್ರಮುಖ ದೇವಸ್ಥಾನಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಮಾಡಿದ್ದಾರೆ. ಇವರ ಮಡದಿ ಶ್ರೀಮತಿ ಪುಷ್ಪ ಹಾಗೂ ಮಗಳು ದಿವ್ಯಶ್ರೀ ಮಗ ದೀಕ್ಷಿತ್ ಸರಳಾಯ ಇವರೊಂದಿಗೆ ವೀರಾಜಪೇಟೆಯ ಹಾತೂರು ಗ್ರಾಮದಲ್ಲಿ ನೆಲೆಸಿದ್ದಾರೆ.
ಶ್ರೀ ಗುರುರಾಜ್ ಕಂಡಿಪಾಡಿತ್ತಾಯ
ಇವರ ತಂದೆ ಶ್ರೀ ಶ್ಯಾಂಸುAದರ್, ತಾಯಿ ಶಾರದ.
ಇವರ ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಿಂದ ಬ್ರಹ್ಮವಾಹಕರಾಗಿ ಸುಮಾರು ೩೭ ವರ್ಷಗಳ ಕಾಲ ಕೊಡಗಿನ ಪ್ರಮುಖ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶ್ರೀ ಗುರುರಾಜ್ ಅವರು ೧೯೭೬ರ ಜುಲೈ ೩೦ ರಂದು ಪೊನ್ನಂಪೇಟೆಯ ಈಚೂರಿನಲ್ಲಿ ಜನಿಸುತ್ತಾರೆ. ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಸರ್ಕಾರಿ ನೌಕರರಾಗಿದ್ದು ಪ್ರವೃತ್ತಿಯಿಂದ ಬ್ರಹ್ಮವಾಹಕರಾಗಿರುತ್ತಾರೆ. ತಂದೆಯ ಬಳಿಯಲ್ಲಿ ನೃತ್ಯ ಅಭ್ಯಾಸ ಮಾಡಿ, ತದನಂತರ ದಿವಂಗತ ನಾಗೇಶ್ ಮತ್ತು ರಘು ಎಂಬ ಇಬ್ಬರು ಚಂಡೆ ನುಡಿಸುವವರು ಹೆಚ್ಚಿನ ಅಭ್ಯಾಸವನ್ನು ಇವರಿಗೆ ನೀಡಿ ಹಲವು ದೇವಸ್ಥಾನಗಳಲ್ಲಿ ಅವಕಾಶ ಸಿಗುವಂತೆ ಮಾಡಿರುತ್ತಾರೆ. ಇವರು ೧೯೯೫ನೇ ಇಸವಿಯಲ್ಲಿ ಬೇಗೂರು ಪೊಲೆಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ಪ್ರಥಮವಾಗಿ ದೇವರನ್ನು ಹೊತ್ತರು. ನಂತರ ಮರಗೋಡು ಶ್ರೀ ಶಿವ ಪಾರ್ವತಿ ದೇವಸ್ಥಾನ, ಚೆಂಬೆಬೆಳ್ಳೂರು ಶ್ರೀ ಭದ್ರಕಾಳಿ, ಕಾವಡಿ ಜೋಡು ಭಗವತಿ ಹಾಗೂ ಇತರ ಪ್ರಮುಖ ೫೫ ದೇವಸ್ಥಾನಗಳಲ್ಲಿ ದೇವರ ಸೇವೆಯನ್ನು ಮಾಡಿದ್ದಾರೆ. ಇವರು ಮಡದಿ ಶುಭಶ್ರೀಯವರೊಂದಿಗೆ ಪೊನ್ನಂಪೇಟೆಯಲ್ಲಿ ನೆಲೆಸಿದ್ದಾರೆ.
ಜೋಡು ದೇವರುಗಳಿರುವ ದೇವಸ್ಥಾನಗಳಲ್ಲಿ ಒಂದೇ ರೀತಿಯ ಪಂಚೆ, ಬ್ರಹ್ಮವಸ್ತç, ಮುಂಡಸು ಧರಿಸಿ ಏಕ ರೀತಿಯಲ್ಲಿ ನೃತ್ಯ ಮಾಡುವುದು ವಿಶೇಷ. ಈ ರೀತಿ ನೃತ್ಯ ಮಾಡುವಲ್ಲಿ ಖ್ಯಾತರಾಗಿರುವವರು ಶ್ರೀ ಗುರುರಾಜ್ ಮತ್ತು ಶ್ರೀ ಸತ್ಯಮೂರ್ತಿ ಸರಳಾಯರು. ಇವರಿಬ್ಬರು ಮೊದಲು ಕೊಡಗಿನಲ್ಲಿ ಬಿಳಿ ಪಂಚೆಯಲ್ಲಿ ದೇವರು ಹೊರುತ್ತಿದ್ದ ಶೈಲಿಯನ್ನು ಬದಲಾಯಿಸಿ, ರಂಗುರAಗಿನ ಮಡಿ ಪಟ್ಟೆಯನ್ನು ಪರಿಚಯಿಸಿದವರು. ಇಬ್ಬರ ನೃತ್ಯ ಶೈಲಿಯಲ್ಲಿ ಅವರದ್ದೇ ಆದ ಚಾಪನ್ನು ಮೂಡಿಸಿಕೊಂಡು ಕೊಡಗಿನಲ್ಲಿ ಪ್ರಸಿದ್ಧರಾಗಿರುತ್ತಾರೆ. ಕೈಯನ್ನು ಬಿಟ್ಟು ದೇವರನ್ನು ಶಿರದಲ್ಲಿ ಇರಿಸಿ ನೃತ್ಯ ಮಾಡುವುದರಲ್ಲಿ ಇಬ್ಬರೂ ಕೂಡ ನಿಪುಣರು. ಹಲವು ಶಿಷ್ಯ ವೃಂದಗಳಿAದ ಕೂಡಿದ ಇವರ ತಂಡ ಕೊಡಗಿನ ಹಲವು ದೇವಸ್ಥಾನಗಳಲ್ಲಿ ದೇವರು ಹೊತ್ತು ನೃತ್ಯಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇವರುಗಳ ನೃತ್ಯ ಶೈಲಿಗೆ ಅಭಿಮಾನದಿಂದ ಹಲವು ಸಂಸ್ಥೆಗಳು, ದೇವಸ್ಥಾನಗಳು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿರುತ್ತಾರೆ.
- ಗುರುಕೃಷ್ಣ ಶಗ್ರಿತ್ತಾಯ, ಮರಗೋಡು, ೯೪೪೯೫೬೨೫೭೧