ಮಡಿಕೇರಿ, ಮಾ. ೩೧: ಮಡಿಕೇರಿಯ ಕೊಡವಕೇರಿ ಸಂಘಗಳ ಪೈಕಿ ಎರಡನೇ ಕೇರಿಯಾಗಿ ಹಲವು ಕಾರ್ಯ ಚಟುವಟಿಕೆಯೊಂದಿಗೆ ಕ್ರಿಯಾಶೀಲವಾಗಿ ಗುರುತಿಸಿ ಕೊಂಡಿರುವ ದೇಚೂರು ಕೊಡವಕೇರಿ ಸಂಘ ೨೫ ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಂಘದ ವಾರ್ಷಿಕ ಮಹಾಸಭೆ, ಒತ್ತೋರ್ಮೆ ಕೂಟ ದೊಂದಿಗೆ ಬೆಳ್ಳಿಹಬ್ಬ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಮಾ.೨೯ರಂದು ಸಂಘದ ಅಧ್ಯಕ್ಷ ಮೂವೇರ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು. ಬೆಳ್ಳಿಗ್ಗೆಯಿಂದ ಕಾವೇರಿ ಪೂಜೆಯೊಂದಿಗೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸನ್ಮಾನ ಮತ್ತಿತರ ಚಟುವಟಿಕೆಗಳು ನಡೆದವು. ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ ಪಾಲ್ಗೊಂಡು ಜನಾಂಗದ ಬೆಳವಣಿಗೆ ಅಭಿವೃದ್ಧಿಯ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೇರಿ ಸಂಘದ ಸ್ಥಾಪನೆಗೆ ಓರ್ವ ಕಾರಣಕರ್ತರೂ ಆಗಿರುವ ಉಳ್ಳಿಯಡ ಎಂ. ಪೂವಯ್ಯ, ಮಾಜಿ ಅಧ್ಯಕ್ಷ ಹಾಗೂ ಹಾಲಿ ಸಲಹೆಗಾರ ಮಾದೆಯಂಡ ರವಿ ಕುಂಞಪ್ಪ, ಸ್ಥಾಪಕ ಕಾರ್ಯದರ್ಶಿ ಮೇವಡ ನಾಣಯ್ಯ, ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಶಕಿ ಕೂಪದಿರ ಶಾರದ ನಂಜಪ್ಪ, ಈ ಬಾರಿ ದೆಹಲಿಯಲ್ಲಿ ನಡೆದ ಆರ್‌ಡಿ ಪೆರೇಡ್‌ನಲ್ಲಿ ಎನ್‌ಸಿಸಿಯಲ್ಲಿ ಪೆರೇಡ್ ಕಮಾಂಡರ್ ಆಗಿದ್ದ ಪೆಮ್ಮಚಂಡ ಪುಣ್ಯ ಪೊನ್ನಮ್ಮ, ಸಂಗೀತ ಸಾಧನೆಗೆ ತಾಪಂಡ ಹರ್ಷಿತ್ ಪೊನ್ನಪ್ಪ, ಕೇರಿ ಸಂಘದ ಸ್ಥಾಪಕಾಧ್ಯಕ್ಷ ಕೂಪದಿರ ದಿ. ಮಿಟ್ಟು ಮಾಚಯ್ಯ ಅವರ ಪರವಾಗಿ ಕೇರಿಯ ಉಪಾಧ್ಯಕ್ಷೆ ಕೂಪದಿರ ಸುಂದರಿ ಮಾಚಯ್ಯ ಇವರುಗಳನ್ನು ಸನ್ಮಾನಿಸಲಾಯಿತು. ಮೂವೆರ ವಸಂತಿ ಜಯರಾಂ ತಂಡದವರು ಕಾವೇರಿ ಪೂಜೆ ನೆರವೇರಿಸಿದರು. ತಾಪಂಡ ಹರ್ಷಿತ್ ಪೊನ್ನಪ್ಪ ಪ್ರಾರ್ಥಿಸಿ, ಕುಂಞರ ಸೋಮಯ್ಯ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಬಟ್ಟೀರ ಎ. ಮೇದಪ್ಪ ನೂತನ ಸದಸ್ಯರ ಪರಿಚಯ ವರದಿ ನೀಡಿದರು. ಮೇವಡ ನಾಣಯ್ಯ, ಮಾದೆಯಂಡ ರವಿಕುಂಞಪ್ಪ ಮತ್ತಿತರರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ತಾಪಂಡ ಸರೋಜ ತಮ್ಮಯ್ಯ ವಂದಿಸಿ, ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು.