ಕಣಿವೆ, ಮಾ. ೩೧: ಇಂದು ವಿದ್ಯಾರ್ಥಿಗಳು ಸಾಮಾಜಿಕ ಬದುಕಿನಿಂದ ವಿಮುಖರಾಗುತ್ತಿದ್ದಾರೆ ಎಂದು ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಮುಖ್ಯ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯೂ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ ರೋವರ್ ಘಟಕಗಳು ಹಾಗೂ ಮಡಿಕೇರಿಯ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ರೇಂಜರ್ ಮತ್ತು ರೋವರ್‌ನ ಸ್ವಯಂಸೇವಕರಿಗೆ ಮೂರು ದಿನಗಳ ಕಾಲ ಮೂಲ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವುಗಳು ಬದುಕಬೇಕಿರುವುದು ಸಮಾಜದೊಳಗೆ, ಅಂತಹ ಸಮಾಜವನ್ನು ಆದರ್ಶಮಯವಾಗಿಡುವುದು ಇಂದಿನ ಅಗತ್ಯಗಳಲ್ಲೊಂದು. ಈ ಕೆಲಸ ಯುವ ಸಮೂಹದಿಂದ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ಸಮಾಜಮುಖಿಯಾಗಲು ರೇಂಜರ್ ಮತ್ತು ರೋವರ್ ಘಟಕಗಳು ವೇದಿಕೆಯಾಗಿವೆ. ಇದರ ಸದುಪಯೋಗವನ್ನು ಸ್ವಯಂಸೇವಕರು ಪಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ಜಿಲ್ಲಾ ಸ್ಕೌಟ್‌ನ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು, ಮಕ್ಕಳಲ್ಲಿ ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ ಇದ್ದಾಗ ಮಾತ್ರ ಸಾಧನೆಯ ಮೆಟ್ಟಿಲನ್ನೇರಬಹುದು ಎಂದರು. ಜಿಲ್ಲಾ ಗೈಡ್ಸ್ ಸಹ ಆಯುಕ್ತರಾದ ಸುಲೋಚನ, ಜಿಲ್ಲಾ ಸಂಚಾಲಕಿ ದಮಯಂತಿ, ರೇಂಜರ್ ಘಟಕದ ಸಂಚಾಲಕರಾದ ಕೆ.ಪಿ. ಕುಸುಮ, ರೋವರ್ ಘಟಕದ ಸಂಚಾಲಕರಾದ ಡಾ. ಸುನೀಲ್ ಕುಮಾರ್ ಎಸ್. ಉಪಸ್ಥಿತರಿದ್ದರು.