ಮಡಿಕೇರಿ, ಏ. ೧ : ವಿದ್ಯಾರ್ಥಿಗಳು ಧೈರ್ಯ, ಆತ್ಮ ವಿಶ್ವಾಸ, ತಾಳ್ಮೆ, ಸಹೋದರತ್ವ ಮತ್ತು ಉತ್ತಮ ವ್ಯಕ್ತಿತ್ವ ವನ್ನು ರೂಪಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕರೆ ನೀಡಿದರು.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿರುವ ದಿ.ಸಿ.ವಿ.ಶಂಕರ ಸ್ವಾಮಿ ಸ್ಮರಣಾರ್ಥ ೩೦ನೇ ವರ್ಷದ ಉಚಿತ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಬಿರಗಳು ವಿದ್ಯಾರ್ಥಿಗಳ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ, ತಾನು ಕೂಡ ಬಾಲ್ಯದಲ್ಲಿ ಹಾಕಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದೆ, ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದೆ. ವಿದ್ಯಾರ್ಥಿಗಳು ಶಿಬಿರದ ಸದುಪಯೋಗ ಪಡೆಯಬೇಕು. ಉತ್ತಮ ತರಬೇತುದಾರರು ತರಬೇತಿ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾಕೂಟದಲ್ಲಿ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಭಾಗವಹಿಸಿ ಕೊಡಗಿಗೆ ಕೀರ್ತಿ ತರುವಂತೆ ಕರೆ ನೀಡಿದರು.

ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಮುಖ್ಯ. ಗುರಿ ಸಾಧಿಸಲು ಹಾಗೂ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಲು ಪ್ರಾಣಾಯಾಮ ಹೆಚ್ಚು ಸಹಕಾರಿಯಾಗಿದೆ ಎಂದರು.

ಯಾವುದೇ ಗುರಿ ಸಾಧನೆಗೆ ಸತತ ಪ್ರಯತ್ನ ಮತ್ತು ಆತ್ಮವಿಶ್ವಾಸ ಮುಖ್ಯ. ಪ್ರತಿಯೊಬ್ಬರಲ್ಲಿ ಒಂದು ಅದ್ಭುತ ಶಕ್ತಿ ಇದೆ, ಇದು ಹೊರ ಬರಬೇಕು, ಶ್ರಮ ವಹಿಸಬೇಕು ಎಂದು ಸ್ವಾಮಿ ವಿವೇಕಾನಂದರ ಕಥೆಯ ಮೂಲಕ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಎನ್.ಮುದ್ದಯ್ಯ, ಜಿಲ್ಲೆಯ ವಿದ್ಯಾರ್ಥಿಗಳು ಈ ಶಿಬಿರದ ಲಾಭವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳಿಗೆ ಉಚಿತವಾಗಿ ಬ್ರೆಡ್, ಬಾಳೆಹಣ್ಣು, ಮೊಟ್ಟೆ, ಹಾಲು ನೀಡಲಾಗುತ್ತದೆ ಎಂದರು.

ಶAಕರ್ ಸ್ವಾಮಿ ಅವರ ಪುತ್ರ ಹಾಗೂ ಕೊಡಗು ವಿದ್ಯಾಭವನ ಸಮಿತಿಯ ಸದಸ್ಯ ಗುರುದತ್, ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ, ಹಾಕಿಪಟು ರಾಜನ್ ಅಪ್ಪಣ್ಣ, ನಗರಸಭೆ ಮಾಜಿ ಸದಸ್ಯ ಚುಮ್ಮಿ ದೇವಯ್ಯ, ಹಾಕಿ ಪಟು ಕೋಟೇರ ನಾಣಯ್ಯ, ತರಬೇತುದಾರರಾದ ಶ್ಯಾಂ ಪೂಣಚ್ಚ, ಗಣೇಶ್, ಲೋಕೇಶ್ ನಾಣಯ್ಯ, ಎಸ್.ಟಿ. ವೆಂಕಟೇಶ್, ಸಂಘಟಕರಾದ ಬಾಬು ಸೋಮಯ್ಯ ಹಾಜರಿದ್ದರು.

ಶಂಕರ್ ಸ್ವಾಮಿ ಅವರ ೯೫ನೇ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಶಿಬಿರವನ್ನು ಉದ್ಘಾಟಿಸಲಾಯಿತು. ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿ ಗಳು ಮೊ. ೯೪೪೮೮೭೩೯೯೯, ೯೪೪೮೮೯೫೯೫೦ ನ್ನು ಸಂಪರ್ಕಿಸಬಹುದಾಗಿದೆ.