ಮಡಿಕೇರಿ, ಏ.೧: ಐರಿ ಸಮುದಾಯದ ೧೦ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾವಳಿ, ಈ ಬಾರಿ ತಾ. ೨೬ ರಿಂದ ಮೂರು ದಿನಗಳ ಕಾಲ ಮೂರ್ನಾಡುವಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಐರಿಮಕ್ಕಡ ಕೂಟ, ಕ್ರೀಡಾಕೂಟವನ್ನು ಕೊಡಗು ಐರಿ ಸಮಾಜ ಸಹಯೋಗದಲ್ಲಿ ನಡೆಸಲಾಗುತ್ತಿದ್ದು ಪುರುಷರಿಗೆ ಕ್ರಿಕೆಟ್ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ತಿಳಿಸಿದೆ. ಕ್ರೀಡೆಯೊಂದಿಗೆ ಸಂಸ್ಕೃತಿಯ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಈ ಬಾರಿ ಕ್ರಿಕೆಟ್ನಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ಕೊಡವ ಭಾಷಿಕ ಸಂಸ್ಕೃತಿಯ ಪ್ರತೀಕವಾಗಿರುವ ಗೆಜ್ಜೆತಂಡ್ ಅನ್ನು ಟ್ರೋಫಿಯಾಗಿ ನೀಡಲಾಗುತ್ತದೆ ಎಂದು ಕ್ರೀಡಾಕೂಟದ ಸಂಚಾಲಕ ಐಮಂಡ ಶರತ್ ಬೆಳ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕ್ರೀಡಾ ಕೂಟಕ್ಕೆ ಗೆಜ್ಜೆತಂಡ್ ಟ್ರೋಫಿ-೨೦೨೪ ಎಂದು ಹೆಸರಿಡಲಾಗಿದೆ. ಕ್ರೀಡಾಕೂಟಕ್ಕೆ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಆಕರ್ಷಕ ಲೋಗೋ ವಿನ್ಯಾಸಗೊಳಿಸಿದ್ದಾರೆ. ಏಪ್ರಿಲ್ ೨೭ರ ಮಧ್ಯಾಹ್ನ ೨ ಗಂಟೆಗೆ ಕ್ರೀಡಾಕೂಟಕ್ಕೆ ಅತಿಥಿ ಗಣ್ಯರು ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಚಾಲನೆ ನೀಡಲಿದ್ದು, ಮೊದಲ ದಿನ ಕ್ರಿಕೆಟ್ ಹಾಗೂ ಮಹಿಳೆಯರ ಹಗ್ಗ ಜಗ್ಗಾಟ ಪೈಪೋಟಿಗಳು ನಡೆಯಲಿವೆ. ಏಪ್ರಿಲ್ ೨೯ರಂದು ಕ್ರಿಕೆಟ್ ಹಾಗೂ ಹಗ್ಗ ಜಗ್ಗಾಟದ ಸೆಮಿಫೈನಲ್ ಹಾಗೂ ಫೈನಲ್ ಹಣಾಹಣಿಗಳು ನಡೆಯಲಿವೆ ಎಂದು ಕ್ರೀಡಾಕೂಟದ ಸಹ ಸಂಚಾಲಕ ಐಮಂಡ ಕಿಶೋರ್ ಕಾವೇರಪ್ಪ ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾವಳಿಯಲ್ಲಿ ೨೫ ಕುಟುಂಬಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಚಾಂಪಿಯನ್ ತಂಡಕ್ಕೆ ಗೆಜ್ಜೆತಂಡ್ ಟ್ರೋಫಿಯೊಂದಿಗೆ ನಗದು ಬಹುಮಾನ ಹಾಗೂ ವೈಯಕ್ತಿಕ ಟ್ರೋಫಿ ನೀಡಲಾಗುತ್ತದೆ. ರನ್ನರ್ ಅಪ್ ತಂಡಕ್ಕೆ ಆಕರ್ಷಕ ಟ್ರೋಫಿ, ನಗದು ಬಹುಮಾನ ಮತ್ತು ವೈಯಕ್ತಿಕ ಟ್ರೋಫಿಗಳನ್ನು ನೀಡಲಾಗುತ್ತದೆ. ಅತ್ಯುತ್ತಮ ಬ್ಯಾಟ್ಸ್ಮನ್, ಬೌಲರ್, ಆಲ್ರೌಂಡರ್ ಸೇರಿದಂತೆ ವೈಯಕ್ತಿಕ ಸಾಧಕರಿಗೂ ಟ್ರೋಫಿ ನೀಡಲಾಗುತ್ತದೆ. ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹಮಾನ ನೀಡಲಾಗುತ್ತದೆ ಎಂದು ಐರಿ ಮಕ್ಕಡ ಕೂಟದ ಮತ್ತೋರ್ವ ಸಹ ಸಂಚಾಲಕ ಮುಲ್ಲೆöÊರಿರ ಮೋಹನ್ ಗಣಪತಿ ತಿಳಿಸಿದ್ದಾರೆ. ಐರಿ ಜನಾಂಗ ಬಾಂಧವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅವರು ಕರೆ ನೀಡಿದ್ದಾರೆ.