ವೀರಾಜಪೇಟೆ, ಏ. ೧: ಜಿಲ್ಲೆಯಲ್ಲಿ ಕಾರ್ಪೊರೇಟರ್ಗಳು, ಅತಿದೊಡ್ಡ ಭೂ ಮಾಲೀಕರು ಅನಧಿಕೃತವಾಗಿ ಒತ್ತುವರಿ ಮಾಡಿರುವ ಭೂಮಿಯನ್ನು ತೆರವುಗೊಳಿಸಬೇಕು. ಭೂ ರಹಿತ ಆದಿವಾಸಿ ದಲಿತ ಸಮುದಾಯ ಹಾಗೂ ಇತರರು ಜಾಗ ಇಲ್ಲದ ನಿವಾಸಿಗಳಿಗೆ ಭೂಮಿಯನ್ನು ಹಂಚಬೇಕು ಎಂದು ಒತ್ತಾಯಿಸಿ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಹಾಗೂ ಪ್ರಗತಿ ಪರ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಹೆಚ್.ಎಸ್. ಕೃಷ್ಣಪ್ಪ ಮಾತನಾಡಿ, ಉಳ್ಳವರು ಒತ್ತುವರಿ ಮಾಡಿರುವ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಭೂ ರಹಿತ ಬಡ ಕಾರ್ಮಿಕ ಕುಟುಂಬಗಳಿಗೆ ಹಂಚುವAತಾಗಬೇಕು. ಸರಕಾರ ಜಾರಿಗೆ ತಂದಿರುವ ಭೂ ಗುತ್ತಿಗೆ ಕಾಯ್ದೆ ಕಂದಾಯ ಕಾಯ್ದೆ ರದ್ದುಗೊಳಿಸಬೇಕು, ಅಕ್ರಮ ಸಕ್ರಮ ಸಮಿತಿಯಡಿ ಬಾಕಿ ಇರುವ ಕಡತಗಳನ್ನು ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಈ ಸಮಸ್ಯೆ ಕೇವಲ ಕೊಡಗಿಗೆ ಮಾತ್ರವಲ್ಲ ಏಲಕ್ಕಿ, ಕಾಫಿ, ಕಾಳು ಮೆಣಸು, ರಬ್ಬರ್, ಟೀ ಸೊಪ್ಪು ಬೆಳೆಯುವ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿಯು ಇದ್ದು ನಾಲ್ಕು ಜಿಲ್ಲೆಯ ಶಾಸಕರುಗಳ ನಿಯೋಗ ತೆರಳಿ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಬಗೆಹರಿಸಬೇಕಾಗಿದ್ದು, ಅಂದು ಸಂಘಟನೆಗಳ ಪ್ರಮುಖರು ಕೂಡ ಭಾಗವಹಿಸುವಂತೆ ತಿಳಿಸಿದರು.
ಶಾಸಕರಿಗೆ ಮನವಿ ಸಲ್ಲಿಸುವ ಸಂದರ್ಭ ಭೂ ಗುತ್ತಿಗೆ ವಿರೋಧಿ ಹೋರಾಟ ಜಿಲ್ಲಾ ಸಮಿತಿಯ ಪ್ರಧಾನ ಸಂಚಾಲಕರುಗಳಾದ ರಮೇಶ್ ಮಾಯಮುಡಿ ಮತ್ತು ವೈ.ಕೆ. ಗಣೇಶ್, ಸಂಚಾಲಕರುಗಳಾದ ಹೆಚ್.ಬಿ. ರಮೇಶ್, ವಿ.ಆರ್. ರಜನಿಕಾಂತ್, ಎ.ಆರ್. ಶಿವಪ್ಪ, ಹೆಚ್.ಎಂ. ಕಾವೇರಿ, ಗಾಯತ್ರಿ ನರಸಿಂಹ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.