ಟಿ ಹೆಚ್.ಜೆ. ರಾಕೇಶ್
ಮಡಿಕೇರಿ, ಏ. ೧: ಬಿಸಿಲ ಬೇಗೆ ಪ್ರವಾಸೋದ್ಯಮ ವಲಯವನ್ನು ಸುಡುತ್ತಿದ್ದು, ಕಳೆದ ಒಂದೆರಡು ತಿಂಗಳಿನಿAದ ಗಣನೀಯ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿರುವುದರಿAದ ‘ಟೂರಿಸಂ’ ಕ್ಷೇತ್ರ ಹಿನ್ನಡೆ ಅನುಭವಿಸುತ್ತಿದೆ. ಸುಡು ಬಿಸಿಲಿನೊಂದಿಗೆ ಚುನಾವಣೆ, ವಿದ್ಯಾರ್ಥಿಗಳ ಪರೀಕ್ಷೆಯಿಂದಲೂ ಪ್ರವಾಸಿಗರ ಸಂಖ್ಯೆ ಕುಸಿಯಲು ಕಾರಣ ಎನ್ನಬಹುದಾಗಿದೆ.
ಹದವಾದ ವಾತಾವರಣದಿಂದ ಬೇಸಿಗೆ ಸಮಯದಲ್ಲಿ ಸೂಕ್ತ ತಾಣವಾಗಿದ್ದ ಕೊಡಗಿನಲ್ಲಿಯೂ ಇದೀಗ ಬಿಸಿಲಾಘಾತದಿಂದ ಜನತೆ ಹೈರಾಣಾಗಿದೆ. ಕಾವೇರಿ ಸೇರಿದಂತೆ ಜಲಮೂಲಗಳಲ್ಲಿ ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಇದರಿಂದ ಜಲಕ್ರೀಡೆಗಳು ಉಲ್ಲಾಸ ಕಳೆದುಕೊಂಡಿವೆ.
ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಪ್ರಮುಖ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಮಡಿಕೇರಿಯ ರಾಜಾಸೀಟ್, ಹೊರವಲಯದ ಅಬ್ಬಿ ಜಲಪಾತ, ಮಾಂದಲಪಟ್ಟಿ, ಕೋಟೆ ಅಬ್ಬಿ, ಸೋಮವಾರಪೇಟೆಯ ಮಲ್ಲಳ್ಳಿ, ದಕ್ಷಿಣ ಕೊಡಗಿನ ಇರ್ಪು, ಕುಶಾಲನಗರದ ನಿಸರ್ಗ ಧಾಮ, ದುಬಾರೆ ಆನೆಶಿಬಿರ, ಹಾರಂಗಿ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ ಕಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಿಸಿಲಿನ ಶಾಖ ತಾಳಲಾರದೆ ಟ್ರೆಕ್ಕಿಂಗ್ ಪಾಯಿಂಟ್‌ಗಳತ್ತ ಮುಖಮಾಡಲು ಚಾರಣಿಗರು ಹಿಂದೇಟು ಹಾಕುತ್ತಿದ್ದಾರೆ.
ಅವಲಂಬಿತರಿಗೆ ಸಂಕಷ್ಟ
ಜಿಲ್ಲೆಯಲ್ಲಿ ಸಾವಿರಾರು ಮಂದಿ ಪ್ರವಾಸೋದ್ಯಮವನ್ನು ಅವಲಂಬಿಸಿಕೊAಡು ಜೀವನ ಸಾಗಿಸುತ್ತಿದ್ದಾರೆ. ಪ್ರತ್ಯೇಕ ಹಾಗೂ ಪರೋಕ್ಷವಾಗಿ ಟೂರಿಸಂ ನಾನಾ ಸ್ತರದ ಜನರ ಬದುಕಿಗೆ ಪೂರಕವಾಗಿದೆ.
ಹೋಂಸ್ಟೇ, ಲಾಡ್ಜ್, ರೆಸಾರ್ಟ್, ಹೊಟೇಲ್
(ಮೊದಲ ಪುಟದಿಂದ) ಉದ್ಯಮಿಗಳಿಗೆ ಅಲ್ಲದೆ ಟ್ಯಾಕ್ಸಿ, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಸ್ಪೆöÊಸಸ್ ಅಂಗಡಿ, ಕರಕುಶಲ ವಸ್ತು ಮಾರಾಟಗಾರರು, ಸಣ್ಣ ವ್ಯಾಪಾರಿಗಳು ಹೀಗೆ ಅನೇಕರಿಗೆ ಪ್ರವಾಸೋದ್ಯಮ ವರದಾನವಾಗಿದೆ. ಆದರೆ, ಕಳೆದ ೧-೨ ತಿಂಗಳಿನಿAದ ಬಿಕೋ ಎನ್ನುತ್ತಿರುವ ಪ್ರವಾಸೋದ್ಯಮದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೋಂಸ್ಟೇ, ಹೊಟೇಲ್, ಲಾಡ್ಜ್ಗಳಲ್ಲಿ ಜನರಿಲ್ಲದೆ ಖಾಲಿ ಹೊಡೆಯುವಂತಾಗಿದೆ.
ಈ ಅವಧಿಯಲ್ಲಿ ಹಿಂದಿನ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಒಂದು ಮಟ್ಟದಲ್ಲಿ ಹೆಚ್ಚೇ ಇತ್ತು. ಆದರೆ, ಈ ವರ್ಷ ಸುಡು ಬಿಸಿಲಿನಿಂದ ಪ್ರವಾಸಕ್ಕೆ ತೆರಳಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಮಹಾನಗರಗಳಲ್ಲಿ ತಲೆದೋರಿರುವ ನೀರಿನ ಸಮಸ್ಯೆ, ಚುನಾವಣೆಯ ಕರ್ತವ್ಯ ಹಾಗೂ ಮಕ್ಕಳಿಗೆ ಪರೀಕ್ಷೆ ಹೀಗೆ ನಾನಾ ಕಾರಣವೂ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲು ಕಾರಣವಾಗಿದೆ.
ಅಶಿಸ್ತು ಬದ್ಧ ಪ್ರವಾಸೋದ್ಯಮದಿಂದಲೂ ಹೊಡೆತ
ಒಂದು ಕಡೆಯಲ್ಲಿ ಜಾಗತಿಕ ತಾಪಮಾನ, ಚುನಾವಣೆ ಕರ್ತವ್ಯ, ಮಕ್ಕಳಿಗೆ ಪರೀಕ್ಷೆ ಪ್ರವಾಸೋದ್ಯಮ ಕುಂದಲು ಕಾರಣವಾದರೆ, ಜಿಲ್ಲೆಯಲ್ಲಿ ಅಶಿಸ್ತು ಬದ್ಧ ಪ್ರವಾಸೋದ್ಯಮವೂ ಇತ್ತೀಚಿಗೆ ಹೊಡೆತ ನೀಡುತ್ತಿರುವುದು ಬಹಿರಂಗವಾದ ಸತ್ಯವಾಗಿದೆ.
ಚಿಕ್ಕಮಗಳೂರು ಸೇರಿದಂತೆ ಇತರ ಕಡೆಗಳಲ್ಲಿ ಶಿಸ್ತು ಬದ್ಧ ಪ್ರವಾಸೋದ್ಯಮ ಕಾಣಬಹುದಾಗಿದೆ. ಆದರೆ, ಶಿಸ್ತಿಗೆ ಹೆಸರಾದ ಕೊಡಗಿನಲ್ಲಿ ಅಶಿಸ್ತು ಪ್ರವಾಸೋದ್ಯಮ ವಲಯದಲ್ಲಿ ಇತ್ತೀಚಿಗೆ ಕಂಡು ಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ಪ್ರವಾಸೋದ್ಯಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಲವು ಆತಿಥ್ಯ ಕೇಂದ್ರಗಳಲ್ಲಿ ಹೆಚ್ಚಿನ ಹಣ ಪಡೆಯುವುದು, ಕೆಲವರು ಪ್ರವಾಸಿಗರ ಮೇಲಿನ ದಬ್ಬಾಳಿಕೆ ನಡೆಸುವುದು ಹೀಗೆ ಅನೇಕ ವಿಚಾರಗಳಿಂದ ಪ್ರವಾಸಿಗರ ಸ್ವರ್ಗಕ್ಕೆ ಕಳಂಕ ಎದುರಾಗು ತ್ತಿರುವುದ ರಿಂದಲೂ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕುವಂತಾಗಿದೆ.
ಸೆಳೆಯುತ್ತಿರುವ ಅನ್ಯ ರಾಜ್ಯ - ದೇಶ
ಈ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ವಿದೇಶ ಹಾಗೂ ನೆರೆ ರಾಜ್ಯಗಳ ಪ್ರವಾಸಿಗರು ಕರ್ನಾಟಕಕ್ಕೆ ಪ್ರವಾಸಕ್ಕಾಗಿ ಬರುತ್ತಿದ್ದರು. ಹಾಗೆಯೇ ಕೊಡಗಿಗೆ ಭೇಟಿ ನೀಡುತ್ತಿದ್ದರು. ಇದೀಗ ಅಯೋಧ್ಯೆ ರಾಮಮಂದಿರ, ಲಕ್ಷದ್ವೀಪ ಒಳಗೊಂಡAತೆ ವಿವಿಧ ಕಡೆಗಳ ಸೆಳೆತ ಹೆಚ್ಚಾಗಿದೆ. ಶ್ರೀಲಂಕಾಗೆ ಉಚಿತ ವೀಸಾ ದೊರೆಯುತ್ತಿರುವ ಕಾರಣ ಅಲ್ಲಿಗೆ ಕಡಿಮೆ ಖರ್ಚಿನಲ್ಲಿ ತೆರಳಬಹುದಾಗಿದೆ. ಇದು ಕೂಡ ಪ್ರವಾಸಿಗರ ಇಳಿಮುಖಕ್ಕೆ ಒಂದು ಕಾರಣ ಎನ್ನಬಹುದಾಗಿದೆ.
ಹೆಚ್ಚಳದ ನಿರೀಕ್ಷೆ
ಪ್ರವಾಸಿಗರ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಮೊದಲು ಮಳೆಗಾಲದಲ್ಲಿಯೂ ‘ಮಾನ್ಸೂನ್ ಟೂರಿಸಂ’ ಪ್ರವಾಸಿಗರ ಆಕರ್ಷಣೆಯಾಗಿತ್ತು. ಮಳೆಯ ನಡುವೆ ವಾತಾವರಣ ಸವಿಯಲೆಂದೆ ಒಂದು ವರ್ಗ ಜಿಲ್ಲೆಗೆ ಆಗಮಿಸುತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಉಂಟಾದ ಪ್ರಾಕೃತಿಕ ವಿಕೋಪ ‘ಮಾನ್ಸೂನ್ ಟೂರಿಸಂ’ ಮೇಲೆ ಕರಿನೆರಳು ಬೀರಿದೆ. ಇದರಿಂದ ಪ್ರವಾಸಿಗರು ಜಿಲ್ಲೆಗೆ ಬರಲು ಕೊಂಚ ಭಯ ಪಡುತ್ತಾರೆ.
ಇದೀಗ ಪರೀಕ್ಷೆ ಮುಗಿಯುವ ಹಂತದಲ್ಲಿದ್ದು, ಚುನಾವಣೆಯ ನಂತರವೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಜೀವಕಳೆ ಬರುವ ವಿಶ್ವಾಸದಲ್ಲಿ ಪ್ರವಾಸೋದ್ಯಮಿಗಳಿದ್ದಾರೆ.