ಮಾರ್ಚ್ ೩೧ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯ ದಾದ್ಯಂತ ಶಸ್ತಾçಸ್ತçಗಳ ಪರವಾನಗಿ ಹೊಂದಿರುವವರು ಆಯುಧಗಳನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ಒಪ್ಪಿಸು ವಂತೆ ರಾಜ್ಯ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಸಂಭವನೀಯ ಕ್ರಿಮಿನಲ್ ಕೃತ್ಯ ಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಸೂಚನೆ ನೀಡಲಾಗಿದೆ.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ಅಧಿಕಾರಿ ಕೆ. ರಾಮರಾಜನ್ ಅವರು ಸಾರ್ವಜನಿಕರು ಬಂದೂಕುಗಳನ್ನು ಮತ್ತು ಇತರ ಆಯುಧಗಳನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಆದರೆ ಕಾಡಂಚಿನ, ಗುಡ್ಡಗಾಡು ಪ್ರದೇಶಗಳು, ಒಂಟಿ ಮನೆಗಳು ಮತ್ತು ಕಾಡುಪ್ರಾಣಿಗಳ ಉಪಟಳ ಇರುವ ನಿವಾಸಿಗಳು, ಬ್ಯಾಂಕ್‌ಗಳು ಮತ್ತು ಚಿನ್ನಾಭರಣ ಅಂಗಡಿಗಳ ಮಾಲೀಕರು ಜಿಲ್ಲಾಧಿಕಾರಿ ಗಳ ನೇತೃತ್ವದ ಜಿಲ್ಲಾ ಪರಿಶೀಲನಾ ಸಮಿತಿಗೆ ಅರ್ಜಿ ಯನ್ನು ಸಲ್ಲಿಸಿ ಕಡ್ಡಾಯ ಠೇವಣಿ ಮಾಡುವುದರಿಂದ ವಿನಾಯ್ತಿಯನ್ನು ಪಡೆಯ ಬಹುದಾಗಿದೆ ಎಂದು ಹೇಳಿದರು. ಈ ರೀತಿ ಬಂದೂಕಿನ ಅವಶ್ಯಕತೆ ಇರುವವರು ಅರ್ಜಿಯನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಿದರೆ ಅಲ್ಲಿನ ಅಧಿಕಾರಿಗಳು ಪೊಲೀಸ್ ಇಲಾಖೆಯ ಅಭಿಪ್ರಾಯಕ್ಕೆ ಇಲಾಖೆಗೆ ರವಾನಿಸು ತ್ತಾರೆ. ಅಂತಹ ಅರ್ಜಿಗಳಿಗೆ ೨೪ ಗಂಟೆಗಳಲ್ಲಿಯೇ ಪೊಲೀಸ್ ನಿರಾಕ್ಷೇಪಣಾ ಪತ್ರವನ್ನು ನೀಡಲಾಗುತ್ತಿದೆ. ಅದರಿಂದ ರೈತರು ಹೆಚ್ಚಿನ ತೊಡಕು, ವಿಳಂಬ ವಿಲ್ಲದೆ, ಕೋವಿ ಇರಿಸಿಕೊಳ್ಳಲು ಅವಕಾಶ ಪಡೆಯಬಹುದು ಎಂದು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ ಪರಿಶೀಲನಾ ಸಮಿತಿಗೆ ೩೩ ಅರ್ಜಿಗಳು ಸಲ್ಲಿಕೆ ಆಗಿದ್ದು ಇದರಲ್ಲಿ ೨೩ ಅರ್ಜಿದಾರರಿಗೆ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದರಲ್ಲದೆ ಇತರ ಅರ್ಜಿಗಳು ಪ್ರಕ್ರಿಯೆಯಲ್ಲಿವೆ ಎಂದು ಹೇಳಿದರು.

ಜಮ್ಮಾ ಹಿಡುವಳಿದಾರರು ಬಂದೂಕು ಠೇವಣಿ ಮಾಡುವುದು ಕಡ್ಡಾಯ ಅಲ್ಲವಾದರೂ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವವರು ಠೇವಣಿ ಮಾಡಬೇಕು ಎಂದರು. ಈಗಾಗಲೇ ಜಿಲ್ಲೆಯಲ್ಲಿ ಹೆಚ್ಚು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರ ಮತ್ತು ರೌಡಿಶೀಟರ್‌ಗಳ ಪಟ್ಟಿ ಮಾಡುವಂತೆ ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಅವರಿಂದ ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸದಿರುವ ಕುರಿತು ಇಂಡೆಮ್ನಿಟಿ ಬಾಂಡ್ ಪಡೆಯಲಾಗುವುದು ಎಂದು ತಿಳಿಸಿದರು.

ವಿಶೇಷವಾಗಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಮಲೆನಾಡು ಪ್ರದೇಶದ ರೈತರು ಮತ್ತು ತೋಟದ ಬೆಳೆಗಾರರು ರಾಜ್ಯದಲ್ಲಿ ಗರಿಷ್ಠ ಸಂಖ್ಯೆಯ ಆಯುಧಗಳನ್ನು ಹೊಂದಿದ್ದಾರೆ. ಜನಸಂಖ್ಯೆಯ ಆಧಾರದಲ್ಲಿ ಪುಟ್ಟ ಜಿಲ್ಲೆ ಕೊಡಗು ಬಂದೂಕು ಮಾಲೀಕರ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಒಟ್ಟು ೪೦೬೭ ಬಂದೂಕು ಪರವಾನಗಿದಾರರು ಇದ್ದಾರೆ. ನೆರೆಯ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ಅತ್ಯಂತ ಹೆಚ್ಚು ಅಂದರೆ ಸುಮಾರು ೮೯೨೪ ಬಂದೂಕು ಪರವಾನಗಿದಾರರನ್ನು ಹೊಂದಿದೆ. ಹಾಸನ ಜಿಲ್ಲೆಯಲ್ಲಿ ಸುಮಾರು ೫೨೧೨ ಬಂದೂಕು ಹೊಂದಿರುವವರು ಇದ್ದು ಶಿವಮೊಗ್ಗ ಜಿಲ್ಲೆಯಲ್ಲಿ ೪೯೫೧ ಬಂದೂಕು ಮಾಲೀಕರು ಇದ್ದಾರೆ.

-ಕೋವರ್ ಕೊಲ್ಲಿ ಇಂದ್ರೇಶ್