ಸೋಮವಾರಪೇಟೆ, ಏ. ೧: ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಜನತಾ ಪಾರ್ಟಿ ಹಾಗೂ ಯುವಕರ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಚಿವ ಶಿವರಾಜ್ ತಂಗಡಗಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ಪಣತೊಟ್ಟು ಉತ್ತಮ ಆಡಳಿತ ನೀಡುತ್ತಿದ್ದಾರೆ. ಇವರ ಆಡಳಿತದಿಂದ ವಿಶ್ವಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ. ಮೋದಿಯ ನಾಯಕತ್ವಕ್ಕೆ ವಿಶ್ವ ಮನ್ನಣೆ ದೊರೆಯುತ್ತಿದೆ. ಯುವ ಜನಾಂಗದ ಭರವಸೆಯಾಗಿ ಮೋದಿ ಹೊರಹೊಮ್ಮಿದ್ದಾರೆ. ಇದನ್ನು ಸಹಿಸದ ಸಚಿವ ತಂಗಡಗಿ ಅವರು ಮೋದಿ ಹೆಸರು ಹೇಳುವ ಯುವಕರ ಕಪಾಳಕ್ಕೆ ಹೊಡೆಯ ಬೇಕೆಂದು ಭಾಷಣ ಮಾಡಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದು ಪ್ರತಿಭಟನೆ ಯಲ್ಲಿದ್ದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳು ಮುಂದುವರೆದರೆ ಯುವಕರು ತಕ್ಕ ಪ್ರತ್ಯುತ್ತರ ನೀಡಲಿ ದ್ದಾರೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಸಚಿವರು ತಮ್ಮ ಸ್ಥಾನದ ಘನತೆ ಮರೆತು ನಾಲಿಗೆ ಹರಿಬಿಟ್ಟಿದ್ದಾರೆ. ದೇಶದ ಯುವ ಶಕ್ತಿಯನ್ನು ನಿಂದಿಸುವ ಮಾತುಗಳ ನ್ನಾಡಿದ್ದಾರೆ. ಮಹಿಳಾ ಶಕ್ತಿ ಮತ್ತು ಯುವ ಶಕ್ತಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಸಚಿವರ ಹೇಳಿಕೆ ಖಂಡನೀಯ. ಹೀಗೆ ಮುಂದು ವರೆದರೆ ಸಚಿವರ ಕಾರ್ಯಕ್ರಮಗಳಿಗೆ ಘೇರಾವ್ ಹಾಕಿ ಮಸಿ ಬಳಿಯುವ ಮೂಲಕ ಪ್ರತಿಭಟನೆ ದಾಖಲಿಸಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಮೋಹಿತ್ ತಿಮ್ಮಯ್ಯ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತ ವಿರೂಪಾಕ್ಷ, ರೈತ ಮೋರ್ಚಾ ಅಧ್ಯಕ್ಷ ಮಚ್ಚಂಡ ಪ್ರಕಾಶ್, ಪ್ರಮುಖರಾದ ಹೆಚ್.ಕೆ. ಮಾದಪ್ಪ, ಶರತ್, ರಕ್ಷಿತ್ ಮಾವಾಜಿ, ತಂಗಮ್ಮ, ಮೋಹಿನಿ, ಪಿ.ಕೆ. ಚಂದ್ರು, ಧರ್ಮಪ್ಪ, ದರ್ಶನ್ ಜೋಯಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.