ಮೂರ್ನಾಡು, ಏ. ೧: ಹೊದ್ದೂರು ಕಣ್ಣ ಬಲಮುರಿ ಗ್ರಾಮದಲ್ಲಿ ನಲೆನಿಂತಿರುವÀ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಉತ್ಸವ ಮತ್ತು ಪುನರ್ ಪ್ರತಿಷ್ಠಾಪನೆಯ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರೆವೇರಿಸಿ ದೇಗುಲದಿಂದ ಕೊಡಗಿನ ಸಾಂಪ್ರದಾಯಿಕವಾದ ವಾದ್ಯ ಗಳೊಂದಿಗೆ ಮೂರ್ನಾಡು ಪೇಟೆಯವರೆಗೆ ಶ್ರೀ ದೇವಿಯ ಶೋಭಾಯಾತ್ರೆ ನಡೆಯಿತು. ವಾಟೆಕಾಡು ಗ್ರಾಮದಿಂದ ದೇಗುಲದವರೆಗೂ ಭಕ್ತರಿಂದ ಹಣ್ಣುಕಾಯಿ ಸೇವೆ ನಡೆಯಿತು. ಶ್ರೀ ದೇವಿಗೆ ತಂಬಿಟ್ಟು ಆರತಿ ಸೇವೆ ನಡೆಸಲಾಯಿತು. ಬಳಿಕ ಶ್ರೀ ದೇವಿಗೆ ಮಹಾಪೂಜೆ ಸಲ್ಲಿಕೆಯಾಯಿತು. ಗ್ರಾಮವಾಸಿಗಳ ಹರಕೆ ಒಪ್ಪಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಎರಡು ದಿನಗಳು ರಾತ್ರಿ ಹಾಗೂ ಹಗಲು ಅನ್ನಸಂತರ್ಪಣೆ ನಡೆಸಲಾಯಿತು.
ವಾರ್ಷಿಕ ಉತ್ಸವದ ವೇಳೆಯಲ್ಲಿ ಶ್ರೀ ಮಾರಿಯಮ್ಮ ಸೇವಾ ಸಮಿತಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಟಿ. ಲಕ್ಷö್ಮಣ್, ತಕ್ಕ ಮುಖ್ಯಸ್ಥರಾದ ಹೆಚ್.ಹೆಚ್. ರಮೇಶ್, ಹೆಚ್.ಟಿ. ರಘು, ಹೆಚ್.ಬಿ. ಗಣೇಶ್, ಹೆಚ್.ಜಿ. ತಿರುಮಲೇಶ ಹಾಗೂ ದೇವಾಲಯದ ಅರ್ಚಕರು, ಆಡಳಿತ ಮಂಡಳಿಯ ಸದಸ್ಯರು, ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು, ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಭಾಗವಹಿಸಿದ್ದರು.