ನಾಪೋಕ್ಲು, ಏ.೧: ನಾಪೋಕ್ಲು ವಾರದ ಸಂತೆಯಲ್ಲಿ ತರಕಾರಿ, ಹಣ್ಣಿನ ಅಂಗಡಿ ಇತರ ವಸ್ತುಗಳು ರಸ್ತೆಯಂಚಿಗೆ ಬಂದಿದ್ದು ನಡೆದಾಡಲೂ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರವAತೂ ಸಾಧ್ಯವೇ ಇಲ್ಲದೆ ಟ್ರಾಫಿಕ್ ಜಾಮ್ ಮಾಮೂಲಾಗಿ ಬಿಟ್ಟಿದೆ. ಸಂತೆಯ ದಿನವಾದ ಸೋಮವಾರ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೆ ವಾಹನ ಮಾಲೀಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಂತೆಯ ದಿನ ರಸ್ತೆಯತ್ತ ದೃಷ್ಟಿಹರಿಸಿದರೆ ಸಾಕು ಸಮಸ್ಯೆಗಳು ಗೋಚರಿಸುತ್ತವೆ.

ರಸ್ತೆ ಬದಿಯಲ್ಲಿ ವ್ಯಾಪಾರಿಗಳು ತಮ್ಮ ವಾಹನಗಳಲ್ಲಿ ತರಕಾರಿ, ಹಣ್ಣು ಹಂಪಲುಗಳನ್ನು, ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ರಸ್ತೆಯಲ್ಲಿ ತೆರಳಲು ಪ್ರಯಾಸ ಪಡುವಂತಾಗಿ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶಗಳಿಂದ ಬರುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲದಾಗಿದೆ. ಪೊಲೀಸ್ ಠಾಣೆಯ ಎದುರು ಭಾಗದಲ್ಲಿಯೂ ಸ್ಥಳಾವಕಾಶದ ಕೊರತೆ ಇದ್ದು ಮಾರುಕಟ್ಟೆ ಆವರಣವಂತೂ ಜನ ದಟ್ಟಣೆಯಿಂದ ಕೂಡಿದ್ದು ವಾಹನಗಳ ನಿಲುಗಡೆ ಮಾಡಲಾರದೆ ಚಾಲಕರು ಪರಿತಪಿಸು ವಂತಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ವಾಹನ ಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆಗಳು ತಪ್ಪಿದ್ದಲ್ಲ.

ಈ ಹಿಂದೆ ಮಾರುಕಟ್ಟೆ ಬಳಿ ಬಸ್ ನಿಲ್ದಾಣಕ್ಕೆ ಯೋಜನೆ ಕೈಗೊಳ್ಳಲಾಗಿತ್ತು. ಅದು ಮೂಲೆಗುಂಪಾಗಿದೆ. ಮಾರುಕಟ್ಟೆಯನ್ನು ವಿಸ್ತರಿಸಿ ವ್ಯಾಪಾರಿಗಳು ಮಾರುಕಟ್ಟೆಯ ಪ್ರಾಂಗಣದೊಳಗೆ ವ್ಯಾಪಾರ ಮಾಡುವಂತೆಯೂ ಸೂಚಿಸಲಾಗಿತ್ತು. ವ್ಯಾಪಾರಿಗಳು ಇತ್ತೀಚೆಗೆ ರಸ್ತೆ ಬದಿಯನ್ನು ಆಕ್ರಮಿಸಿಕೊಂಡಿದ್ದು ವಾಹನಗಳ ದಟ್ಟಣೆ ಸಮಸ್ಯೆಯಾಗಿ ಕಾಡುತ್ತಿದೆ. ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವಂತೆ ಆಗಿದೆ. ರಸ್ತೆಯ ಎರಡು ಬದಿಗಳಲ್ಲಿ ಹಣ್ಣು ಹಂಪಲುಗಳು, ತರಕಾರಿಗಳ ಮಾರಾಟ ಸೋಮವಾರ ದಿನ ನಡೆಯುವುದರಿಂದ ವಾಹನ ನಿಲುಗಡೆ ಸಾಧ್ಯವೇ ಇಲ್ಲದ ಪರಿಸ್ಥಿತಿ ಎದುರಾಗಿದ್ದು ಗ್ರಾಮ ಪಂಚಾಯಿತಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

- ದುಗ್ಗಳ ಸದಾನಂದ.