ಸೋಮವಾರಪೇಟೆ, ಏ. ೧: ಆಧುನಿಕ ಯುಗ, ತಂತ್ರಜ್ಞಾನದ ನಾಗಾಲೋಟದ ನಡುವೆ ದೇಶೀ ಕ್ರೀಡೆಗಳು, ಸ್ಥಳೀಯ ಆಟಗಳು ಬಹುತೇಕ ಮರೆಯುವಂತಾಗಿದೆ. ಇಂದಿನ ಮಕ್ಕಳಿಗಂತೂ ಚಿನ್ನಿದಾಂಡು, ಲಗೋರಿ, ಕುಂಟೆಬಿಲ್ಲೆ, ಗೋಲಿಯಾಟ, ಬುಗುರಿಯಾಟಗಳು ಗೊತ್ತೇ ಇಲ್ಲ. ಹಾಕಿ, ಕ್ರಿಕೆಟ್, ಕಬಡ್ಡಿಯ ಹವಾ ಎಲ್ಲೆಡೆಯೂ ಆವರಿಸಿಕೊಂಡಿವೆ. ಈ ನಡುವೆ ಕಿಬ್ಬೆಟ್ಟ ಗ್ರಾಮದ ಯುವಕರು ಗ್ರಾಮೀಣ ಕ್ರೀಡೆಯಾದ ಲಗೋರಿ ಆಟವನ್ನು ಪಂದ್ಯಾವಳಿಯನ್ನಾಗಿಸಿ ಗಮನ ಸೆಳೆದಿದ್ದಾರೆ.

ಸಮೀಪದ ಕಿಬ್ಬೆಟ್ಟ ಗ್ರಾಮದ ವಿವೇಕಾನಂದ ಯುವಕ ಸಂಘದಿAದ ಇದೇ ಪ್ರಥಮ ಬಾರಿಗೆ ಆಯೋಜಿಸಿದ ಲಗೋರಿ ಕ್ರೀಡಾಕೂಟ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು. ಪ್ರೇಕ್ಷಕರಿಗೆ ಪಂದ್ಯಾಟ ಮನೋರಂಜನೆ ಒದಗಿಸಿತು.

ಕಳೆದ ೪೦ ವರ್ಷಗಳ ಹಿಂದೆ ಗ್ರಾಮದ ಯುವ ಜನರನ್ನು ಸಂಘಟಿ ಸುವ ಮೂಲಕ ಗ್ರಾಮಾಭಿವೃದ್ಧಿಗೆ ಹೆಜ್ಜೆಯಿಟ್ಟ ವಿವೇಕಾನಂದ ಯುವಕ ಸಂಘದ ಸ್ಥಾಪಕರುಗಳು, ಲಗೋರಿ ಕ್ರೀಡೆಗೆ ಚಾಲನೆ ನೀಡಿದ್ದು ವಿಶೇಷ ವಾಗಿತ್ತು. ಅಂದು ಯುವಕರಾಗಿದ್ದ ಮಂದಿ ಇಂದು ೬೦ರ ಗಡಿ ದಾಟಿದ್ದು, ಸಂಘವನ್ನು ಇಂದಿನ ಯುವಕರು ಮುನ್ನಡೆಸುತ್ತಿರುವುದು, ಅದರಲ್ಲೂ ನಾವೆಲ್ಲರೂ ಆಟವಾಡಿ ಸಂಭ್ರಮಿಸಿದ ಲಗೋರಿ ಕ್ರೀಡಾಕೂಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂಬ ಮಾತುಗಳು ಹಿರಿಯರಿಂದ ಬಂದವು.

ಕಿಬ್ಬೆಟ್ಟ ಗ್ರಾಮದ ವಿವೇಕಾನಂದ ಯುವಕ ಸಂಘದ ಮೈದಾನದಲ್ಲಿ ಆಯೋಜಿಸಿದ್ದ ಮೊದಲನೇ ವರ್ಷದ ಲಗೋರಿ ಕ್ರೀಡಾಕೂಟವನ್ನು ಗ್ರಾಮದ ಹಿರಿಯರಾದ ಶೇಷಪ್ಪ ಉದ್ಘಾಟಿಸಿದರು. ನಂತರ ಮಾತನಾಡಿ, ಆಧುನಿಕ ಆಟಗಳ ನಡುವೆ ಮಣ್ಣಿನ ಆಟಗಳು ಮರೆಯಾಗುತ್ತಿರುವುದು ವಿಷಾಧನೀಯ. ನೆಲದ ಆಟಗಳು ಪರಸ್ಪರ ಸಂಭ್ರಮಕ್ಕೆ ವೇದಿಕೆಯಾಗಿವೆ. ಮನೆಮಂದಿಯೆಲ್ಲಾ ಭಾಗಿಯಾಗುವ ಆಟಗಳು ಕುಟುಂಬದಲ್ಲಿ ಸಾಮರಸ್ಯ ವೃದ್ಧಿಸಲು ಪೂರಕವಾಗಿವೆ ಎಂದರು.

ಇAದು ಬಹುತೇಕ ಆಟಗಳು ಜೂಜುಗಳಾಗಿ ಮಾರ್ಪಟ್ಟಿವೆ. ಈ ಹಿಂದೆ ಇದ್ದ ಬುಗುರಿ, ಲಗೋರಿ, ಚಿನ್ನಿದಾಂಡು, ಗೋಲಿ, ಕಟ್ಟೆಮನೆ, ಕುಂಟೆಬಿಲ್ಲೆ ಸೇರಿದಂತೆ ಇನ್ನಿತರ ಆಟಗಳು ಕಣ್ಮರೆಯಾಗುತ್ತಿವೆ. ಇಂತಹ ಆಟಗಳನ್ನು ಮತ್ತೆ ಮುನ್ನೆಲೆಗೆ ತರುವ ಕೆಲಸ ಆಗಬೇಕಿದೆ. ಗ್ರಾಮೀಣ ಆಟಗಳು ಮನಸ್ಸಿಗೆ ಮುದ ನೀಡುತ್ತವೆ. ಸ್ಫೂರ್ತಿ ಚಿಮ್ಮಿಸುತ್ತವೆ. ಕ್ರೀಡಾಮನೋಭಾವನೆಯನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಯುವಕ ಸಂಘದವರು ಲಗೋರಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಕ್ರೀಡಾಕೂಟದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದ ಡಾ. ನಿಧಿ ಮಾತನಾಡಿ, ಲಗೋರಿ ಕ್ರೀಡೆ ಮಾನಸಿಕ ಹಾಗೂ ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡೆಗಳು ಹೆಚ್ಚು ನಡೆಯಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಮಂದಣ್ಣ, ಪರಮೇಶ್, ಚಂದ್ರಪ್ಪ, ಲಿಂಗರಾಜು, ಎಂ.ಬಿ. ಪೂವಯ್ಯ, ಗ್ರಾಮಾಧ್ಯಕ್ಷ ಹರೀಶ್, ಉಪಾಧ್ಯಕ್ಷ ಕೆ.ಕೆ. ಧರ್ಮಪ್ಪ, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ವೀರಕೇಸರಿ, ಗೌರವಾಧ್ಯಕ್ಷ ನವೀನ್, ಪ್ರಮುಖರಾದ ಮನಿಲ್‌ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಥಮ ವರ್ಷದ ಕ್ರೀಡಾಕೂಟದಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಗ್ರಾಮಸ್ಥರ ಚಪ್ಪಾಳೆ, ಪ್ರೋತ್ಸಾಹದ ನಡುವೆ ಸಂಭ್ರಮದಿAದ ಲಗೋರಿ ಪಂದ್ಯಾಟ ನಡೆಯಿತು. ಸೋಮವಾರಪೇಟೆಯ ನಿಧಿ ಆಯುರ್ವೇದಿಕ್ ಕ್ಲಿನಿಕ್‌ನ ಡಾ. ನಿಧಿ ಅವರು ಉಚಿತವಾಗಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದರು.