ಸಿದ್ದಾಪುರ, ಏ. ೧: ಕಾಡಾನೆ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದ್ದರೂ ಕೂಡ ಕಾಡಿಗೆ ತೆರಳದೇ ಕಾಫಿ ತೋಟಗಳಲ್ಲೇ ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ.

ಕುಶಾಲನಗರ ವಲಯದ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ವಾಲ್ನೂರು - ತ್ಯಾಗತ್ತೂರು, ಅಭ್ಯತ್‌ಮಂಗಲ, ನೆಲ್ಲಿಹುದಿಕೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟು ದಾಂಧಲೆ ನಡೆಸುತ್ತಿದೆ. ಅಲ್ಲದೇ ಇತ್ತೀಚೆಗೆ ವಾಲ್ನೂರು ಭಾಗದಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಹಾನಿಗೊಳಿಸಿತ್ತು. ಅಲ್ಲದೇ ನೆಲ್ಲಿಹುದಿಕೇರಿಯ ಮೇರಿಲ್ಯಾಂಡ್ ಕಾಫಿ ತೋಟದೊಳಗೆ ಕಾರ್ಮಿಕನೋರ್ವನ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟಲು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಗ್ರಾಮಸ್ಥರ ದೂರಿನ ಮೇರೆಗೆ ಸೋಮವಾರದಂದು ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ, ಅತ್ತಿಮಂಗಲ, ಮೇರಿಲ್ಯಾಂಡ್, ವಾಲ್ನೂರು - ತ್ಯಾಗತ್ತೂರು ಗ್ರಾಮಗಳಲ್ಲಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಯತ್ನಿಸಿದರು. ಆದರೆ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಟ್ಟು ಕಾಫಿ ತೋಟಗಳನ್ನು ಬಿಟ್ಟು ಕದಲಲು ಹಿಂದೇಟು ಹಾಕಿದವು.

ಕಾರ್ಯಾಚರಣೆಯ ತಂಡವನ್ನು ಸುತ್ತಾಡಿ ಸುಸ್ತುಬರಿಸಿದವು. ಕಾರ್ಯಾಚರಣೆ ಸಂದರ್ಭ ೫ ಸಲಗಗಳು ಪತ್ತೆ ಆದವು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್‌ಕುಮಾರ್, ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಹಾಜರಿದ್ದರು. - ವಾಸು