ಪೆರಾಜೆ, ಏ. ೧: ಸುಳ್ಯ ಮತ್ತು ಮಡಿಕೇರಿ ಗಡಿಭಾಗದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯುವ ವಿಶಿಷ್ಟ ಮುಗಿಲೆತ್ತರದ ಈ ಮುಡಿಗೆ ವಿಶೇಷ ಆಕರ್ಷಣೆ ಇದೆ. ತುಳುನಾಡಿನ ಭೂತಾರಾಧನೆ ಮತ್ತು ಕೇರಳದ ತೆಯ್ಯಂನ ಮಿಳಿತದೊಂದಿಗೆ ನಡೆಯುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ಪೆರಾಜೆ ಗ್ರಾಮದ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆಯಿತು.

ಪುರಾಣದ ಹಿನ್ನೆಲೆಯಲ್ಲಿ ಪಾರ್ವತಿ ದೇವಿಯ ತಂದೆ ದಕ್ಷ ಯಜ್ಞ ಮಾಡುತ್ತಿರುವ ವೇಳೆ ಅಳಿಯನಾದ ಈಶ್ವರ ದೇವರಿಗೆ ಹೇಳಿರಲಿಲ್ಲ. ಈ ಯಜ್ಞದ ವಿಷಯ ತಿಳಿದ ಪಾರ್ವತಿ ತಂದೆ ನಡೆಸುವ ಯಜ್ಞದಲ್ಲಿ ಭಾಗವಹಿಸುತ್ತೇನೆ ಎಂದು ತನ್ನ ಪತಿ ಈಶ್ವರನಲ್ಲಿ ಪ್ರಾರ್ಥಿಸುತ್ತಾಳೆ. ಆದರೆ ಆಮಂತ್ರಣ ಇಲ್ಲದ ಯಜ್ಞಕ್ಕೆ ಹೋಗುವುದು ಬೇಡ ಎಂದು ಈಶ್ವರ ಹೇಳಿದರೂ, ಪಾರ್ವತಿ ಹೋಗುತ್ತಾಳೆ. ಆದರೆ ಅಲ್ಲಿ ಎಲ್ಲ ದೇವರಿಗೆ ಮಾನ್ಯತೆ ನೀಡಿದರೂ ತನ್ನ ಪತಿ ಈಶ್ವರನಿಗೆ ಸಿಗಲಿಲ್ಲ. ಇದರಿಂದ ಅವಮಾನಗೊಂಡ ಪಾರ್ವತಿ ರೌದ್ರ ಅವತಾರವಾಗಿ ತನ್ನ ಶರೀರದಲ್ಲಿ ಬೆಂಕಿ ಉತ್ಪತ್ತಿಮಾಡಿ, ಯೋಗಾಗ್ನಿಯಲ್ಲಿ ಬೆಂದುಹೋದಳು. ಬಳಿಕ ರೌದ್ರರೂಪ ಒಂದು ಭಾಗವಾದ ಪಾರ್ವತಿ ಭಗವತಿ ದೈವವಾಗಿ ಆರಾಧನೆ ಮಾಡಲಾಗುತ್ತದೆ ಎಂದು ಕಥೆ ಮೂಲಕ ಹೇಳಲಾಗುತ್ತಿದೆ.

ಪೆರಾಜೆಯಲ್ಲಿ ಮೂಲದೇವರಾಗಿ ಧರ್ಮ ಶಾಸ್ತಾರನ ಆರಾಧನೆ ಮಾಡಲಾಗುತ್ತದೆ. ಧರ್ಮ ಶಾಸ್ತಾರ ಎಂದರೆ ಈಶ್ವರ ಮತ್ತು ಪಾರ್ವತಿಯ ಪುತ್ರ. ಪುತ್ರನ ರಕ್ಷಣೆಗಾಗಿ ಬಂದಿರುವುದು ಪಾರ್ವತಿಯ ರೂಪದ ಭಗವತಿ ದೇವಿ ಎಂದು ಹೇಳಲಾಗುತ್ತಿದ್ದು, ಆ ಮೂಲಕ ಭಗವತಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ.

ರೌದ್ರ ಅವತಾರದಲ್ಲಿ ಒಂದಾದ ಭಗವತಿ ದೇವಿಯ ಮುಡಿಯು ದೇವಿ ಗುಡಿಯ ಹತ್ತಿರದ ಹುಲಿಚಾಡಿಯಷ್ಟು ಉದ್ದ ಇರಬೇಕು ಎಂದು ಬಾಯಿ ಮಾತಿನಿಂದ ಹೇಳಲಾಗುತ್ತಿದೆ. ಆದರೆ ಭಗವತಿ ಮುಡಿ ಅಳತೆ ಇಲ್ಲ. ಅದು ಅಡಿ-ಮುಡಿಯವರೆಗೆ ಎಂಬ ಗಾದೆಯಂತೆ ಭೂಮಿಯಿಂದ ಆಕಾಶದವರೆಗೂ ಇರಬಹುದು ಅದಕ್ಕೆ ಲೆಕ್ಕಚಾರ ಇಲ್ಲ.

ಭಗವತಿ ದೈವದ ಮುಡಿಯನ್ನು ಬಣ್ಣರ ಜಾತಿಯವರು ಕಟ್ಟುತ್ತಿದ್ದಾರೆ. ಅಡೂರು ಬೆಡಿ, ತೊಡಿಕಾನ ಕೊಡಿ, ಪೆರಾಜೆ ಮುಡಿ ಎನ್ನುವ ನಾಣ್ನುಡಿಯಂತೆ ಪೆರಾಜೆ ಭಗವತಿ ಮುಡಿ ಪ್ರತಿವರ್ಷದಂತೆ, ಈ ವರ್ಷವೂ ಅದೇ ರೀತಿ ನಡೆಯಿತು. ಈ ಸಂದರ್ಭದಲ್ಲಿ ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸಾವಿರಾರು ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಿ, ಪ್ರಸಾದ ಸ್ವೀಕರಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕರಾದ ರಾಜಗೋಪಾಲ ರಾಮಕಜೆ ತಕ್ಕ ಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ. ಆಡಳಿತ ಸಮಿತಿ ಸದಸ್ಯರುಗಳು, ಪ್ರಧಾನ ಅರ್ಚಕ ವೆಂಕಟ್ರಮಣ ಪಾಙ್ಞಣ್ಣಾಯ, ಅರ್ಚಕ ವೃಂದ ಮತ್ತು ಸಿಬ್ಬಂದಿವರ್ಗ ಹಾಗೂ ಸಾವಿರಾರು ಮಂದಿ ಭಗವದ್ಭಕ್ತರು ಭಾಗವಹಿಸಿದ್ದರು. -ಗಿರೀಶ್, ಪೆರಾಜೆ