ಮಡಿಕೇರಿ, ಏ. ೧: ಜಿಲ್ಲಾ ಸ್ವೀಪ್ ಸಮಿತಿ ಮತ್ತು ರೋಟರಿ ಜಿಲ್ಲೆ ೩೧೮೧ ರವರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನದ ಪ್ರಯುಕ್ತ ನಗರದ ರಾಜಾಸೀಟ್ ಮುಂಭಾಗದಲ್ಲಿ ಮತದಾನ ಜಾಗೃತಿ ಕುರಿತಾದ ಬೀದಿ ನಾಟಕ ಮತ್ತು ಕಾರು ರ‍್ಯಾಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ ವರ್ಣಿತ್ ನೇಗಿ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ಜಾಗೃತಿ ಕುರಿತಾಗಿ ಸಾರ್ವಜನಿಕರು ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ ೧೯೫೦ ಮತ್ತು ಸಿ.ವಿಜಿಲ್ ಆ್ಯಪ್ ಬಳಕೆ ಕುರಿತಾಗಿ ಮಾಹಿತಿ ನೀಡಿದರು. ಅಲ್ಲದೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವಂತೆ ಕರೆ ನೀಡಿದರು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತ ದಾರರು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಸಂವಿಧಾನದ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದರು. ಉಪ ವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಮಾತನಾಡಿ, ಮತದಾನ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಆದ್ಯ ಕರ್ತವ್ಯ. ತಮ್ಮ ಮುಂದಿನ ಭವಿಷ್ಯಕ್ಕಾಗಿ ತಪ್ಪದೇ ಮತ ಚಲಾಯಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೌನೇಶ್ ವಿಶ್ವಕರ್ಮ ತಂಡದವರು ಮತದಾನದ ಮಹತ್ವ ಕುರಿತು ಪ್ರಸ್ತುತಪಡಿಸಿದ ಬೀದಿ ನಾಟಕವು ಗಮನ ಸೆಳೆಯಿತು. ಕಾರ್ಯ ಕ್ರಮದಲ್ಲಿ ರೋಟರಿ ಪ್ರಮುಖರಾದ ಅನಂತಶಯನ, ರೋಟರಿ ಜಿಲ್ಲೆ ೩೧೮೧ ರ ಮುಖ್ಯಸ್ಥರಾದ ಶ್ರೀ ವಿಶ್ವನಾಥ ಶಣೈ ಇದ್ದರು. ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವರ್ಗದವರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು ಇದ್ದರು.