ಕಣಿವೆ, ಏ. ೧ : ಸಾಮಾನ್ಯವಾಗಿ ಮಹಾಶಿವರಾತ್ರಿ ಕಳೆದ ಬಳಿಕ ಕುಶಾಲನಗರ ವ್ಯಾಪ್ತಿಯಲ್ಲಿ ವಾಡಿಕೆಯ ಒಂದೆರಡು ಮಳೆ ಸುರಿಯಬೇಕಿತ್ತು. ಆದರೆ ಮಳೆ ಸುರಿಯುತ್ತಿಲ್ಲ. ಬಿಸಿಲ ಆರ್ಭಟವಂತೂ ಬಹಳ ಜೋರಾಗಿದೆ. ಎಷ್ಟರ ಮಟ್ಟಿಗೆ ಬಿಸಿಲ ರಣಕಹಳೆ ಮೊಳಗಿದೆ ಎಂದರೆ ಭೂಮಿಯ ಮೇಲೆ ಹಸಿರ ಹೊದಿಕೆಯೇ ಇರಲಾರದಷ್ಟು ಬಲವಾಗಿದೆ. ಇದರಿಂದಾಗಿ ಸೆಕೆ ಜಾಸ್ತಿಯಾಗಿದ್ದು ಕೂಲರ್, ಎಸಿ, ಫ್ಯಾನ್‌ಗಳಿಲ್ಲದೇ ಮನೆಗಳಲ್ಲಿ ಇರಲಾಗುತ್ತಿಲ್ಲ.

ಮಕ್ಕಳು ಹಾಗೂ ವಯೋವೃದ್ದರ ಸ್ಥಿತಿಯಂತೂ ಹೇಳತೀರದಾಗಿದೆ. ಹೊಲ ಗದ್ದೆಗಳಲ್ಲಿ ಕೃಷಿಕರು ಯಾವೊಂದು ಕೃಷಿ ಚಟುವಟಿಕೆಗಳನ್ನು ಮಾಡಲಾಗುತ್ತಿಲ್ಲ.

ಏಕೆಂದರೆ ಸೂರ್ಯನ ತಾಪ ಕೃಷಿಕನ ನೆತ್ತಿ ಸುಟ್ಟರೆ, ಹೊಲ ಗದ್ದೆಗಳ ಮಣ್ಣು ರೈತನ ಒಡಲು ಸುಡುತ್ತಿದೆ. ಏಕೆಂದರೆ ಹೊಲ ಗದ್ದೆಗಳಲ್ಲಿ ಕೃಷಿ ಮಾಡಲು ಅಳವಡಿಸಿದ್ದ ಕೊಳವೆ ಬಾವಿಗಳು ಅಂತರ್ಜಲ ಕುಸಿತವಾಗಿ ಕೈಚೆಲ್ಲಿವೆ. ಕುಡಿವ ನೀರಿನ ಬವಣೆ ಕೇವಲ ಪೇಟೆ ಪಟ್ಟಣಗಳಿಗೆ ಸೀಮಿತವಾಗಿಲ್ಲ. ಅದು ಹಳ್ಳಿಗಳಿಗೂ ಆವರಿಸಿದೆ.

ಕುಡಿವ ನೀರಿಗಾಗಿ ಅವರಿವರನ್ನು ಕಾಡಿ ಬೇಡಿ ಅಲ್ಲಲ್ಲಿ ಅಲೆದು ಬಿಂದಿಗೆ ಕೊಡಗಳಲ್ಲಿ ತಲೆ ಮೇಲೆ ಹೊತ್ತು ಮನೆಗೆ ತರುವಂತಹ ದುಸ್ಥಿತಿ ಕಂಡುಬರುತ್ತಿದೆ.

ಜಾನುವಾರುಗಳಿಗೆ ದಾಹ ನೀಗಿಸಲು ಆಸರೆಯಾಗಿದ್ದಂತಹ ಕೆರೆ ಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ. ಮಳೆಯನ್ನು ನಂಬಿ ಜೊತೆಗೆ ಕೊಳವೆ ಬಾವಿಗಳ ನೀರನ್ನು ನಂಬಿ ಒಂದಷ್ಟು ಕೃಷಿಕರು ಶುಂಠಿ ಬಿತ್ತನೆ ಮಾಡಿದ್ದು ಇದೀಗ ನೀರು ಸ್ಥಗಿತವಾಗಿದ್ದು ಲಕ್ಷಾಂತರ ರೂಗಳನ್ನು ಸುರಿದು ಶುಂಠಿ ಬೆಳೆಗೆ ಮುಂದಾಗಿದ್ದ ಅನೇಕ ಕೃಷಿಕರ ನೆಮ್ಮದಿ ಹಾಳಾಗಿದೆ.

ಇದರಿಂದಾಗಿ ಮನನೊಂದ ರೈತ ಹಾಕಿದ ಬೆಳೆ ಉಳಿಸಿಕೊಳ್ಳಲು ನೀರಿಲ್ಲದ ಕೊಳವೆ ಬಾವಿಗಳನ್ನು ಮತ್ತಷ್ಟು ಆಳಕ್ಕೆ ಇಳಿಸಿ ಅವುಗಳ ಆಪರೇಷನ್ ಗೆ ರೈತರು ಮುಂದಾಗಿದ್ದಾರೆ. ಇತ್ತ ಬೆಳೆ ನಷ್ಟ ಭೀತಿ ಹಾಗೂ ಈಗಾಗಲೇ ಶುಂಠಿ ಬೆಳೆಗೆ ಲಕ್ಷಾಂತರ ರೂಗಳನ್ನು ವಿನಿಯೋಗಿಸಿರುವ ಕೃಷಿಕರು (ತುರ್ತು ನಿಗಾ ಕೊಠಡಿ ) ಐಸಿಯುನೊಳಗಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಇನ್ನಾದರೂ ವಾರದೊಳಗೆ ಮಳೆ ಬಂದಲ್ಲಿ ಸಂಪೂರ್ಣ ಕುಸಿತಗೊಂಡ ಅಂತರ್ಜಲಕ್ಕೆ ನಿಸರ್ಗವೇ ಒಂದಷ್ಟು ಚಿಕಿತ್ಸೆ ಕೊಟ್ಟಲ್ಲಿ ಐಸಿಯುನಲ್ಲಿ ಇರುವ ಕೃಷಿಕನಿಗೆ ಜೀವ ಬಂದAತಾಗುತ್ತದೆ.