ಮಡಿಕೇರಿ, ಏ. ೧: ಲೋಕಸಭಾ ಚುನಾವಣಾ ಅಖಾಡದಲ್ಲಿ ಒಂದು ಬಾರಿ ಮಾತ್ರ ಕೊಡಗು ಸ್ವತಂತ್ರ ಕ್ಷೇತ್ರವಾಗಿ ಚುನಾವಣೆ ಎದುರಿಸಿದ್ದು ಬಿಟ್ಟರೆ ನಂತರದಲ್ಲಿ ಮಂಗಳೂರು ಹಾಗೂ ಮೈಸೂರು ಕ್ಷೇತ್ರದೊಂದಿಗೆ ವಿಲೀನಗೊಂಡಿದೆ. ಕೊಡಗು ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿದ್ದಾಗ ಕ್ಷೇತ್ರವನ್ನು ೧೯೫೨ ರಿಂದ ೫೭ವರೆಗೆ ಜಿಲ್ಲೆಯ ನಿಡ್ಯಮಲೆ ಸೋಮಣ್ಣ ಅವರು ಪ್ರತಿನಿಧಿಸಿದ್ದರು. ೧೯೫೬ವರೆಗೆ ಕೊಡಗು ಜಿಲ್ಲೆ ಪ್ರತ್ಯೇಕ ಸಿ ರಾಜ್ಯವಾಗಿ ಗುರುತಿಸಿಕೊಂಡಿತ್ತು.

ರಾಜ್ಯ ಪುನರ್ ವಿಂಗಡಣೆಯಾದ ನಂತರ ಕೊಡಗು, ಮೈಸೂರು ರಾಜ್ಯದೊಂದಿಗೆ ಸೇರಿಕೊಂಡು, ರಾಜ್ಯದ ಸ್ಥಾನಮಾನ ಕಳೆದುಕೊಂಡಿತ್ತು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಕದ ಮಂಗಳೂರು ಕ್ಷೇತ್ರದೊಂದಿಗೆ ವಿಲೀನಗೊಂಡಿತ್ತು.

ಕೊಡಗು-ಮAಗಳೂರು ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೊದಲ ಚುನಾವಣೆಯಲ್ಲಿ ಕ್ಷೇತ್ರದ ಮೊದಲ ಸಂಸದರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೆ.ಆರ್ ಆಚಾರ್ ಗೆಲುವು ಸಾಧಿಸಿದ್ದರು. ೧೯೬೨ರಿಂದ ೬೭ರವರೆಗೆ ಕೊಡಗು-ಮಂಗಳೂರು ಕ್ಷೇತ್ರವನ್ನು ಶಂಕರ್ ಆಳ್ವಾ ಪ್ರತಿನಿಧಿಸಿದ್ದರು.

೧೯೬೭ರಿಂದ ೭೧ವರೆಗೆ ಕೊಡಗು- ಮಂಗಳೂರು ಲೋಕಸಭಾ ಕ್ಷೇತ್ರವನ್ನು ಕೊಡಗಿನವರಾದ ಸಿ.ಎಂ ಪೂಣಚ್ಚ ಅವರು ಪ್ರತಿನಿಧಿಸಿ, ಈ ಅವಧಿಯಲ್ಲಿ ಪೂಣಚ್ಚ ಅವರು ಕೇಂದ್ರದ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಸಿ.ಎಂ ಪೂಣಚ್ಚ ಅವರು ಕೊಡಗಿನ ಕೊನೆಯ ಸಂಸದರಾಗಿದ್ದಾರೆ. ನಂತರ ನಡೆದ ಯಾವುದೇ ಲೋಕಸಭಾ ಚುನಾವಣೆಯಲ್ಲಿ ಕೊಡಗಿನವರು ಗೆಲುವು ಸಾಧಿಸಿಲ್ಲ. ಮಂಗಳೂರಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

೧೯೭೧ರಿಂದ ೭೬ರವರೆಗೆ ಕೆ.ಕೆ ಶೆಟ್ಟಿ ಅವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಂತರ ನಡೆದ ನಾಲ್ಕು ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸುವುದರ ಮೂಲಕ ೧೯೭೭ ರಿಂದ ೯೦ವರೆಗೆ ಮಂಗಳೂರಿನವರಾದ ಕಾಂಗ್ರೆಸ್ ಪಕ್ಷದ ಜನಾರ್ದನ ಪೂಜಾರಿ ಅವರು ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಛಾಪು ಮೂಡಿಸಿದ್ದರು.

ಬಲಿಷ್ಠಗೊಂಡ ಭಾಜಪ!

೧೯೯೦ರಿಂದ ಬದಲಾದ ರಾಜಕೀಯ ಸನ್ನಿವೇಶಗಳಿಂದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯಕ್ಕೆ ಹಿಂದುತ್ವದ ಅಲೆ ಪ್ರವೇಶಿಸಿ ಎರಡು ಜಿಲ್ಲೆಯಲ್ಲಿ ಕೂಡ ಬಿಜೆಪಿ ಬಲಿಷ್ಠವಾಗಿ ಪಕ್ಷ ಸಂಘಟನೆಯಾಗ ತೊಡಗಿತ್ತು. ೧೯೯೦ ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಡಗು-ಮಂಗಳೂರು ಕ್ಷೇತ್ರದ ಚಿತ್ರಣ ಸಂಪೂರ್ಣ ಬದಲಾಗಿತ್ತು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ, ಸತತ ನಾಲ್ಕು ಬಾರಿ ಕ್ಷೇತವನ್ನು ಪ್ರತಿನಿಧಿಸಿದ್ದ ಸೋಲಿಲ್ಲದ ಜನಾರ್ಧನ ಪೂಜಾರಿ ಅವರನ್ನು ಸೋಲಿಸಿ, ಸಂಘ ಪರಿವಾರದ ಬೆಂಬಲ, ಸಹಕಾರದಿಂದ ೧೯೯೦ರಿಂದ ೨೦೦೪ರವರೆಗೆ ಬಿಜೆಪಿಯ ವಿ. ಧನಂಜಯ್ ಕುಮಾರ್ ಅವರು ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸಿದ್ದರು.

೨೦೦೪ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಕೊನೆಯ ಚುನಾವಣೆಯಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ ಸದಾನಂದಗೌಡ ಅವರು ಅವರು ಗೆಲುವು ಸಾಧಿಸಿದ್ದರು. ಡಿ.ವಿಎಸ್ ಅವರು ಗೆದ್ದು ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಕೊನೆಯ ಸಂಸದರಾಗಿದ್ದಾರೆ. ನಂತರ ನಡೆದ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಕೊಡಗು ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಬೇರ್ಪಟ್ಟು ಪಕ್ಕದ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡಿತ್ತು.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರವಾಗಿ ರಚನೆಗೊಂಡ ಬಳಿಕ ೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಸಂಸದರಾಗಿ ಕಾಂಗ್ರೆಸ್ ಪಕ್ಷದ ಎಚ್.ವಿಶ್ವನಾಥ್ ಗೆಲುವು ಸಾಧಿಸಿದ್ದರು. ನಂತರ ೨೦೧೪ರಿಂದ ೨೦೧೯ರವರೆಗೆೆ ಕ್ಷೇತ್ರವನ್ನು ಬಿಜೆಪಿಯ ಹಾಲಿ ಸಂಸದ ಪ್ರತಾಪ್ ಸಿಂಹ ಪ್ರತಿನಿಧಿಸಿದ್ದಾರೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿ ಪ್ರತಾಪ್ ಸಿಂಹ ಕಾರ್ಯನಿರ್ವಹಿಸುತ್ತಿದ್ದಾರೆ.

ಕೊಡಗಿನವರ ಕೈ ಹಿಡಿಯದ ಕ್ಷೇತ್ರ

ಕೊಡಗು ಪ್ರತ್ಯೇಕ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಚುನಾವಣೆಯನ್ನು ಎದುರಿಸಿದ್ದು ಒಂದು ಬಾರಿ ಮಾತ್ರ. ಆಗ ಕೊಡಗು ಪ್ರತ್ಯೇಕ ಸಿ ರಾಜ್ಯವಾಗಿತ್ತು. ರಾಜ್ಯದ ಸ್ಥಾನಮಾನ ಕಳೆದುಕೊಂಡಾಗಿನಿAದ, ಪ್ರತ್ಯೇಕ ಲೋಕಸಭಾ ಕ್ಷೇತ್ರವನ್ನು ಕೂಡ ಕೊಡಗು ಕಳೆದುಕೊಂಡಿತ್ತು. ಇದುವರೆಗೆ ಲೋಕಸಭೆಯನ್ನು ಪ್ರವೇಶಿಸಿದ್ದು ಕೊಡಗಿನ ಇಬ್ಬರು ವ್ಯಕ್ತಿಗಳು ಮಾತ್ರ.

ಕೊಡಗು ರಾಜ್ಯವಾಗಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ನಿಡ್ಯಮಲೆ ಸೋಮಣ್ಣ ಹಾಗೂ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡ ಬಳಿಕ ಸಿ.ಎಂ ಪೂಣಚ್ಚ ಅವರು ಒಂದು ಬಾರಿ ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿ ಲೋಕಸಭೆ ಪ್ರವೇಶಿಸಿ ಇತಿಹಾಸ ಸೃಷ್ಟಿಸಿದ್ದರು. ನಂತರ ನಡೆದ ಎಲ್ಲಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕೊಡಗಿನವರಿಗೆ ಟಿಕೆಟ್ ಕೂಡ ನಿರಾಕರಣೆ ಮಾಡುತ್ತಾ ಬಂದಿವೆ. ಕೊಡಗಿನ ಜನರು ಲೋಕಸಭಾ ಚುನಾವಣೆಯಲ್ಲಿ ಕೇವಲ ಮತದಾರರಾಗಿಯೇ ಉಳಿದಿದ್ದಾರೆ. ತಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಮತ ಹಾಕುವ ಭಾಗ್ಯವನ್ನು ಕೊಡಗಿನ ಜನತೆಯ ಪಾಲಿಗೆ ದೂರವಾಗಿಯೇ ಉಳಿದುಬಿಟ್ಟಿವೆ. ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಟಿಕೆಟ್ ಕೇಳಲು ಕೂಡ ಜಿಲ್ಲೆಯ ಮುಖಂಡರು ಹಿಂಜರಿಯುತ್ತಿದ್ದಾರೆ.

೧೯೭೭ ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಿರಿಯ ವಕೀಲ ದಿವಂಗತ ಎ.ಕೆ ಸುಬ್ಬಯ್ಯನವರು ಜನತಾ ಪಾರ್ಟಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ವಿರುದ್ಧ ೨ ಸಾವಿರ ಮತಗಳ ಅಂತರದಿAದ ಸೋಲು ಕಂಡಿದ್ದರು. ೨೦೦೪ ರಲ್ಲಿ ಕೊಡಗು-ಮಂಗಳೂರು ಲೋಕಸಭಾ ಕ್ಷೇತ್ರದ ಕೊನೆಯ ಚುನಾವಣೆಯಲ್ಲಿ ಎ.ಕೆ ಸುಬ್ಬಯ್ಯ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ ವಿರುದ್ಧ ಸೋಲು ಕಂಡಿದ್ದರು.

ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ವಿಲೀನಗೊಂಡ ಬಳಿಕ ನಡೆದ ಮೊದಲ ಚುನಾವಣೆ ಯಲ್ಲಿ ೨೦೦೯ ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿ.ಎ ಜೀವಿಜಯ ೨,೧೬,೨೮೩ ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.

-ಕೆ. ಎಂ. ಇಸ್ಮಾಯಿಲ್ ಕಂಡಕರೆ