ಮುಳ್ಳೂರು, ಏ. ೧: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಮಿತಿ ಮೀರಿದ ಕಾಡಾನೆ ಸೇರಿದಂತೆ ವನ್ಯಪ್ರಾಣಿ ಉಪಟಳ ತಡೆಗೆ ಒತ್ತಾಯಿಸಿ ತಾಲೂಕು ರೈತ ಹಾಗೂ ಬೆಳೆಗಾರರ ಸಂಘದ ವತಿಯಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಕಾಡಾನೆ ದಾಳಿಯಿಂದ ಬೆಳೆಗಾರ ಸಾವಿನ ಪ್ರಕರಣ ಸೇರಿದಂತೆ ಈ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾನವ-ಪ್ರಾಣಿ ಸಂಘರ್ಷವನ್ನು ಅರಣ್ಯ ಇಲಾಖೆಯವರು ಕೊನೆಗಾಣಿಸುವುದು, ಕಾಡಾನೆಗಳನ್ನು ಹಿಡಿಯುವುದು, ಕಾಡಾನೆ ದಾಳಿಯಿಂದ ಮೃತಪಟ್ಟ ರೈತರಿಗೆ ಪರಿಹಾರ ಮೊತ್ತವನ್ನು ಏರಿಸುವುದು, ವೈಜ್ಞಾನಿಕ ಕ್ರಮ ಮತ್ತು ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವಿತ ಪರಿಹಾರ ಒದಗಿಸಿಕೊಡುವುದು ಸೇರಿದಂತೆ ಮುಂತಾದ ಬೇಡಿಕೆಯನ್ನು ಸೋಮವಾರಪೇಟೆ ತಾಲೂಕು ರೈತ ಸಂಘ ಮತ್ತು ಶನಿವಾರಸಂತೆ ಬೆಳೆಗಾರರ ಸಂಘದ ವತಿಯಿಂದ ಸೋಮವಾರ ಶನಿವಾರಸಂತೆ ಆರ್ಎಫ್ಒ ಮೂಲಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅವೈಜ್ಞಾನಿಕ ಕ್ರಮಕೈಗೊಂಡಿದೆ. ಇದರಿಂದ ಕಾಡಾನೆ ನಾಡಿಗೆ ಬಂದು ರೈತರು ಬೆಳೆದಿರುವ ಬೆಳೆಗಳನ್ನು ನಾಶಗೊಳಿಸುತ್ತಿವೆ. ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದರೆ, ಕಡಿಮೆ ಪರಿಹಾರ ನೀಡಲಾಗುತ್ತದೆ. ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ವೈಜ್ಞಾನಿಕ ಕ್ರಮಕೈಗೊಳ್ಳಬೇಕು, ಕಾಡಾನೆಯನ್ನು ಹಿಡಿಯುವಂತೆ ಒತ್ತಾಯಿಸಿದರು.
ರೈತ ಸಂಘದ ಉಪಾಧ್ಯಕ್ಷ ಹೆಗ್ಗುಳ ಹೂವಯ್ಯ, ಕೂಗೂರು ನಾಗರಾಜ್ ಮಾತನಾಡಿದರು. ರೈತರ ಬೇಡಿಕೆಗೆ ಪ್ರತಿಕ್ರಿಯಿಸಿದ ಆರ್ಎಫ್ಓ ಗಾನಶ್ರೀ ಶನಿವಾರಸಂತೆ ಅರಣ್ಯ ವಲಯದಲ್ಲಿ ಎರಡೂವರೆ ಹೆಕ್ಟೇರ್ನಷ್ಟು ಅರಣ್ಯ ಒಳಗೊಂಡಿದೆ ಆದರೆ ಮಧ್ಯೆ ಮಧ್ಯೆ ಚಿಕ್ಕಪುಟ್ಟ ಅರಣ್ಯಗಳಿದ್ದು ಪಕ್ಕದಲ್ಲಿ ರೈತರ ಜಮೀನುಗಳಿರುತ್ತವೆ. ಕಾಡಾನೆಗಳು ಒಂದು ಅರಣ್ಯದಿಂದ ಮತ್ತೊಂದು ಅರಣ್ಯದೊಳಗೆ ಸಂಚರಿಸುವ ಸಂದರ್ಭದಲ್ಲಿ ಹಳ್ಳಿಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಡಾನೆಗಳು ಜಮೀನುಗಳಿಗೆ ಬರುತ್ತವೆ. ಶನಿವಾರಸಂತೆ ಅರಣ್ಯ ವಲಯದಲ್ಲಿ ಒಟ್ಟು ೪೫ ಕಾಡಾನೆಗಳಿವೆ ಎಂದು ವಿತರಿಸಿದ ಅವರು, ರೈತರ ಬೇಡಿಕೆಗೆ ಇಲಾಖೆಯು ಸ್ಪಂದಿಸುತ್ತದೆ ಮನವಿ ಪತ್ರವನ್ನು ಮೇಲಧಿಕಾರಿಗಳು ಮತ್ತು ಸರಕಾರಕ್ಕೆ ಕಳುಹಿಸಿಕೊಡಲಾ ಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರೈತ ಪ್ರಮುಖರಾದ ಕೇಶವಮೂರ್ತಿ, ಬೆಳೆಗಾರರ ಸಂಘದ ಡಿ.ಬಿ.ಧರ್ಮಪ್ಪ, ಎಸ್.ಎಂ. ಉಮಾಶಂಕರ್ ಮತ್ತು ರೈತರು ಹಾಜರಿದ್ದರು.