ಸಿದ್ದಾಪುರ, ಏ. ೨: ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಸಲಗವೊಂದು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಘಟನೆ ನೆಲ್ಲಿಹುದಿಕೇರಿ ಅತ್ತಿಮಂಗಲ ಬಳಿ ನಡೆದಿದೆ.
ಸಲಗದ ದಾಳಿಯಿಂದಾಗಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೊದಲೆಳೆಯ ಅಂತರದಿAದ ಪಾರಾಗಿದ್ದಾರೆ.
ಕಳೆದೆರೆಡು ದಿನಗಳಿಂದ ಕುಶಾಲನಗರ ವಲಯದ ಮೀನುಕೊಲ್ಲಿ ಅರಣ್ಯ ವ್ಯಾಪ್ತಿಗೆ ಒಳಪಡುವ ಅಭ್ಯತ್ಮಂಗಲ, ನೆಲ್ಲಿಹುದಿಕೇರಿ ಅತ್ತಿಮಂಗಲ, ಕಾಟೀಬಾಣಿ, ವಾಲ್ನೂರು-ತ್ಯಾಗತ್ತೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಯಿತು. ಈ ಸಂದರ್ಭದಲ್ಲಿ ೬ ಕಾಡಾನೆಗಳು ಪತ್ತೆ ಆಗಿರುತ್ತವೆ. ಈ ಪೈಕಿ ೪ ಕಾಡಾನೆಗಳನ್ನು ಕಾರ್ಯಾಚರಣೆ ತಂಡ ಶ್ರಮಪಟ್ಟು ಕಾಫಿ ತೋಟಗಳಿಂದ ಅರಣ್ಯಕ್ಕೆ ಅಟ್ಟಿದರು. ದುಬಾರೆ ಕಾವೇರಿ ನದಿಯನ್ನು ದಾಟಿಸಿದ್ದರು. ನದಿ ದಾಟಿದ ನಾಲ್ಕು ಸಲಗಗಳು ದುಬಾರೆ ಮೀನುಕೊಲ್ಲಿ ಅರಣ್ಯದತ್ತ ತೆರಳಿದವು. ಆದರೆ ಕಾಡಾನೆಗಳ ಹಿಂಡಿನಿAದ ಬೇರ್ಪಟ್ಟ ಎರಡು ಕಾಡಾನೆಗಳು ಕಾಫಿ ತೋಟದೊಳಗೆ ಸುತ್ತಾಡುತ್ತಾ ತೋಟದಲ್ಲೇ ಉಳಿದುಕೊಂಡಿವೆ. ಕಾರ್ಯಾಚರಣೆ ತಂಡವು ಎಷ್ಟೇ ಪ್ರಯತ್ನಪಟ್ಟರೂ ಎರಡು ಸಲಗಗಳು ತೋಟ ಬಿಟ್ಟು ಕದಲದೇ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುತ್ತಿದ್ದವು ಎಂದು ಇಲಾಖಾಧಿಕಾರಿಗಳು ತಿಳಿಸಿದರು. ಕಾರ್ಯಾಚರಣೆಯ ತಂಡದ ಶಬ್ಧ ಕೇಳಿ ಸಲಗವೊಂದು ಅರಣ್ಯ ಸಿಬ್ಬಂದಿಗಳನ್ನು ಬೆನ್ನಟ್ಟಿದೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳು ಕಾಫಿ ತೋಟದೊಳಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಈ ಭಾಗದಲ್ಲಿ ಸಲಗವೊಂದು ಉಪಟಳ ನೀಡುತ್ತಿದ್ದು ಮಾನವನ ಹಾಗೂ ವಾಹನಗಳ ಮೇಲೆ ದಾಳಿ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಹಾಗೂ ೨೦ ಮಂದಿ ಸಿಬ್ಬಂದಿಗಳು ಭಾಗವಹಿಸಿದ್ದರು. -ವಾಸು