ಪೊನ್ನಂಪೇಟೆ, ಏ. ೨: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಪವಿತ್ರ ರಂಜಾನ್ ಮಾಸಾಚರಣೆಯ ಗೌರವಾರ್ಥ ವೀರಾಜಪೇಟೆಯಲ್ಲಿ ಕೆ.ಎಂ.ಎ. ಇಫ್ತಾರ್ ಆತ್ಮೀಯ ಕೂಟ-೨೦೨೪ ಅನ್ನು ಆಯೋಜಿಸಲಾಯಿತು. ವೀರಾಜಪೇಟೆಯ ಗೌರಿಕೆರೆ ಸಮೀಪದಲ್ಲಿರುವ ಮದರಸಾ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಜೀವ ಕಾರುಣ್ಯ ಕ್ಷೇತ್ರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಸಮಕಾಲೀನ ಯುಗದಲ್ಲಿ ನೈತಿಕತೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಯುವಕರು ಅಧ್ಯಾತ್ಮಿಕತೆಯೊಂದಿಗೆ ಉತ್ತಮ ಸಾಮಾಜಿಕ ಬೆಳವಣಿಗೆಯ ಹಾದಿಯತ್ತ ತಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ರಂಜಾನ್ ತಿಂಗಳು ಎಲ್ಲಾ ಬಯಕೆಗಳ ಮೇಲೆ ನಿಯಂತ್ರಣ ಹೇರಿಕೊಂಡು ಸಮಾಜದಲ್ಲಿ ನಾಗರಿಕನಾಗಿ, ಆರೋಪಗಳಿಂದ ಮುಕ್ತನಾಗಿ, ಅಪರಾಧಗಳಿಂದ ದೂರವಿದ್ದು ಇತರರಿಗೆ ಮಾದರಿಯಾಗುವಂತೆ ಜೀವನ ತನ್ನದಾಗಿಸಿಕೊಳ್ಳುವ ಹಲವಾರು ಸಾಮಾಜಿಕ, ನೈತಿಕ ಮೌಲ್ಯಗಳನ್ನು ಕಲಿಸಿಕೊಡುವ ವಾರ್ಷಿಕ ತರಬೇತಿಯೂ ಹೌದು ಎಂದು ಅಭಿಪ್ರಾಯಪಟ್ಟರು.
ಕೊಡವ ಮುಸ್ಲಿಂ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷರಾದ ಮೂರ್ನಾಡಿನ ಹಿರಿಯ ವೈದ್ಯರಾಗಿರುವ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಇಸ್ಲಾಂ ೧೪ ಶತಮಾನಗಳ ಹಿಂದೆಯೇ ವೈಜ್ಞಾನಿಕತೆಗೆ ಹೆಚ್ಚು ಒತ್ತು ನೀಡಿದೆ. ವ್ರತಾಚರಣೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಹಲವು ವೈಜ್ಞಾನಿಕ ಸಂಶೋಧನೆಗಳು ಸಾಬೀತುಪಡಿಸಿವೆ. ಉಪವಾಸವು ಹೃದಯ ಸ್ತಂಭನ, ಪಾರ್ಶ್ವವಾಯು, ಮಧುಮೇಹ ಖಿನ್ನತೆಯಂತಹ ಗಂಭೀರ ಕಾಯಿಲೆಗಳ ಸಂಭವವನ್ನು ಕಡಿಮೆ ಮಾಡುತ್ತದೆ ಎಂದರು. ವೇದಿಕೆಯಲ್ಲಿ ವೀರಾಜಪೇಟೆಯ ಶಾಫಿ ಜುಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ರಶೀದ್, ಕೆ.ಎಂ.ಎ. ಉಪಾಧ್ಯಕ್ಷರಾದ ಅಕ್ಕಳತಂಡ ಎಸ್. ಮೊಯ್ದು, ಸಂಸ್ಥೆಯ ಮಾಜಿ ನಿರ್ದೇಶಕರು ಮತ್ತು ನಿವೃತ್ತ ಉಪ ತಹಶೀಲ್ದಾರ ಚಿಮ್ಮಿಚ್ಚಿರ ಎ. ಅಬ್ದುಲ್ಹಾ ಹಾಜಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ವೀರಾಜಪೇಟೆಯ ಶಾಫಿ ಜುಮ್ಮಾ ಮಸೀದಿಯ ಖತೀಬರಾದ ರವೂಫ್ ಹುದವಿ ನೇತೃತ್ವ ವಹಿಸಿದ್ದರು.
ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಎA. ಇಸ್ಮಾಯಿಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಜಂಟಿ ಕಾರ್ಯದರ್ಶಿ ಮುಸ್ತಫ ವಂದಿಸಿದರು. ನಂತರ ಸಂಜೆ ನಡೆದ ಇಫ್ತಾರ್ ಸಂಗಮದಲ್ಲಿ ಕೆ.ಎಂ.ಎ. ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.