ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಏ. ೨ : ಕೊಡವರಿಗೆ ಪ್ರತ್ಯೇಕ ಭೌಗೋಳಿಕ ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡುವ ಸಂಬAಧ ಕೊಡವ ನ್ಯಾಷನಲ್ ಕೌನ್ಸಿಲ್ ಹೋರಾಡುತ್ತಿದ್ದು ಈ ಸಂಬAಧ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆದರೆ ಸಲ್ಲಿಸಲಾಗಿರುವ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ ಕೊಡಗು ಜಿಲ್ಲೆಯ ಮೂಲನಿವಾಸಿ ಎಸ್ಸಿ, ಎಸ್ಟಿ, ಬುಡಕಟ್ಟು ಹಾಗೂ ಆದಿವಾಸಿ ಸಮುದಾಯಗಳು ಹೈಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಿವೆ. ಸೋಮವಾರ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಹಾಜರಾಗಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಡಲಾಗಿರುವ ಮನವಿ ಪರಿಗಣಿಸಲ್ಪಟ್ಟರೆ ಅದು ಇಡೀ ಜಿಲ್ಲೆಯ ಮೂಲನಿವಾಸಿ ಬುಡಕಟ್ಟು ಜನಾಂಗಗಳ ಬದುಕು ಮತ್ತು ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅರ್ಜಿದಾರರ ಮನವಿ ಪ್ರತ್ಯೇಕ ರಾಜ್ಯದ ಬೇಡಿಕೆಯ ಸ್ವರೂಪದ್ದಾಗಿದೆ. ಮೂಲ ಅರ್ಜಿಯಲ್ಲಿನ ಬೇಡಿಕೆಗಳು ಇಡೀ ಕೊಡಗು ಜಿಲ್ಲೆಯ ಜನತೆ, ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇ.೩೦ರಷ್ಟು ಇರುವ ಎಸ್ಸಿ-ಎಸ್ಟಿ, ಆದಿವಾಸಿ, ಬುಡಕಟ್ಟು, ಒಬಿಸಿ ವರ್ಗಗಳ ಮೇಲೆ ಪರಿಣಾಮ ಉಂಟು ಮಾಡಲಿದೆ. ಆದ್ದರಿಂದ ಮಧ್ಯಂತರ ಅರ್ಜಿ ವಿಚಾರಣೆಗೆ ಅಂಗೀಕರಿಸಿ, ನಮ್ಮ ಅಹವಾಲು ಆಲಿಸಬೇಕು ಎಂದು ಮನವಿ ಮಾಡಿದರು.
ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ವಕೀಲ ಸುಬ್ರಮಣಿಯನ್ ಸ್ವಾಮಿ, ಪ್ರತ್ಯೇಕ ಭೌಗೋಳಿಕ ರಾಜಕೀಯ ಸ್ವಾಯತ್ತತೆಯು ಸಂವಿಧಾನದತ್ತ ಅವಕಾಶ ಮತ್ತು ಹಕ್ಕು ಆಗಿದೆ ಎಂದು ವಾದಿಸಿದ್ದು ಆಂತರಿಕವಾಗಿ ಸ್ವಯಂ ರಾಜಕೀಯ ನಿರ್ಣಯಗಳ ಹಕ್ಕು ನೀಡಬೇಕು ಎಂಬುದಷ್ಟೇ ಕೊಡವ ಜನಾಂಗದ ಬೇಡಿಕೆಯಾಗಿದೆ. ಪ್ರತ್ಯೇಕ ರಾಜ್ಯದ ಬೇಡಿಕೆ ಇಲ್ಲವೇ ಇಲ್ಲ . ಈ ವಿಚಾರದಲ್ಲಿ ಕೊಡಗಿನವರ ಬಗ್ಗೆ ಕಪೋಲಕಲ್ಪಿತ ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಧ್ಯಂತರ ಅರ್ಜಿ ವಿಚಾರಣೆಗೆ ಅಂಗೀಕರಿಸಿದರೆ ವಿಷಯವನ್ನು ಇನ್ನಷ್ಟು ವಿಸ್ತೃತವಾಗಿ ಪರಾಮರ್ಶಿಸುವ ಅವಕಾಶಗಳು ಸಿಕ್ಕಂತಾಗುವುದಿಲ್ಲವೇ ಎಂದು ಪ್ರಶ್ನಿಸಿತು. ಅದಕ್ಕೆ ಮಧ್ಯಂತರ ಅರ್ಜಿ ಪರಿಗಣಿಸುವುದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು. ಆಗ ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾಯಪೀಠ, ಮೂಲ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮಧ್ಯಂತರ ಅರ್ಜಿದಾರರಿಗೆ ಮತ್ತು ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮೂಲ ಅರ್ಜಿದಾರರಿಗೆ ಸೂಚಿಸಿ, ವಿಚಾರಣೆಯನ್ನು ಜೂನ್ ೫ ಕ್ಕೆ ಮುಂದೂಡಿದೆ.
ಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಕ್ಷೇಪಿಸಿ ಕೊಡಗು ಜಿಲ್ಲೆಯ ಮೂಲ ನಿವಾಸಿ ಎಸ್ಸಿ-ಎಸ್ಟಿ, ಬುಡಕಟ್ಟು, ಆದಿವಾಸಿ, ಒಬಿಸಿ ಸಮುದಾಯಗಳನ್ನು ಪ್ರತಿನಿಧಿಸುವ ಜಿಲ್ಲೆಯ ಕೊಡವ ಬೋಣಿಪಟ್ಟ ಸಮಾಜ, ಕೋಯವÀ ಸಮಾಜ, ಅಖಿಲ ಕೊಡಗು ಪಣಿಕ ಸಮಾಜ, ಸವಿತ ಸಮಾಜ ಕೈಕೇರಿ, ಕೊಡಗು ಬಣ್ಣ ಸಮಾಜ, ಕೊಡಗು ಕೊಡವ ಮಡಿವಾಳ ಸಮಾಜ, ಕೊಲೆಯ ಸಮಾಜ, ಕೊಡಗು ಜಿಲ್ಲಾ ಕೆಂಬಟ್ಟಿ ಅಭಿವೃದ್ಧಿ ಸಮಾಜ, ಕೊಡಗು ಹೆಗ್ಗಡೆ ಸಂಘ ಮತ್ತು ಸಮಾಜ, ಕೊಡಗು ಜಿಲ್ಲಾ ಗೊಲ್ಲ ಸಮಾಜ ಸೇರಿದಂತೆ ೧೦ ಸಂಘ-ಸAಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿವೆ.
ಇದೇ ವೇಳೆ ಮೂಲ ಅರ್ಜಿದಾರರ ಮನವಿಯನ್ನು ಬೆಂಬಲಿಸುವ ಮತ್ತೊಂದು ಮಧ್ಯಂತರ ಅರ್ಜಿಯನ್ನು ಬೆಂಗಳೂರು ಕೊಡವ ಸಮಾಜದ ವತಿಯಿಂದ ಸಲ್ಲಿಸಲಾಯಿತು. ಈ ಅರ್ಜಿದಾರರ ಪರ ಅಜಿತ್ ನಾಚಪ್ಪ, ರಾಜ್ಯದ ಪರ ಎಸ್.ಎಸ್. ಮಹೇಂದ್ರ, ಕೇಂದ್ರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿಭೂಷಣ್ ಹಾಜರಿದ್ದರು.