..!ಕರಿಕೆ, ಏ. ೨: ಬಿಸಿಲಿನ ಬೇಗೆಗೆ ಕುಡಿಯಲು ನೀರಿಲ್ಲದೆ ಜನ - ಜಾನುವಾರುಗಳು, ವನ್ಯಜೀವಿಗಳು ತತ್ತರಿಸಿದ್ದು, ನದಿ ತೊರೆಗಳು ಬತ್ತಿ ಅಲ್ಲೋ ಇಲ್ಲೋ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ನೀರು ಕಂಡು ಬರುತ್ತಿದೆ. ಇದನ್ನು ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಗ್ರಾಮದ ಚಂದ್ರಗಿರಿ ನದಿಗೆ ಮೀನು ಹಿಡಿಯಲು ವಿಷ ಹಾಕಿದ್ದು ಇದರಿಂದಾಗಿ ನೀರಿನಲ್ಲಿದ್ದ ಮೀನು, ಏಡಿಗಳು ಸೇರಿದಂತೆ ಇತರ ಜಲಚರಗಳ ಮಾರಣಹೋಮವಾಗಿದೆ.
ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಉತ್ತರ ಭಾಗದಿಂದ ಹುಟ್ಟುವ ಈ ನದಿಯು ಚಂದ್ರಗಿರಿ ಎನ್ನುವಲ್ಲಿ ಸಮುದ್ರ ಸೇರುತ್ತಿದ್ದು, ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ನದಿಗೆ ಬೇಸಿಗೆಯಲ್ಲಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿ ಕುಡಿಯಲು ನೀರನ್ನು ಬಳಸುತ್ತಿದ್ದಾರೆ. ರಾತ್ರಿ ವೇಳೆ ಕಿಡಿಗೇಡಿಗಳು ಮೈಲುತುತ್ತು (ಕಾಪರ್ ಸಲ್ಫೇಟ್) ಬಳಸಿ ಮೀನು ಹಿಡಿಯುತ್ತಿದ್ದು, ಇದರಿಂದಾಗಿ ಅಲ್ಪ ಪ್ರಮಾಣದ ನೀರಿನಲ್ಲಿದ್ದ ಜಲಚರಗಳ ಪ್ರಾಣಕ್ಕೆ ಕುತ್ತುಂಟಾಗಿದೆ. ಪರಿಸರ ಇಲಾಖೆಯವರು ಕೂಡಲೇ ಕಿಡಿಗೇಡಿಗಳ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕಿದೆ. ಇಲ್ಲವಾದಲ್ಲಿ ನೀರನ್ನು ಸೇವಿಸಿದ ಜನರ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ಸಂದೇಹವಿಲ್ಲ. -ಸುಧೀರ್ ಹೊದ್ದೆಟ್ಟಿ