ನಾಪೋಕ್ಲು, ಏ. ೨: ವಿದ್ಯಾರ್ಥಿ ಗಳು ಮೊಬೈಲನ್ನು ಉತ್ತಮ ವಿಚಾರ ಗಳಿಗಾಗಿ ಮಾತ್ರ ಬಳಸಬೇಕೆಂದು ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಅಧ್ಯಾಪಕಿ ಕೆ.ಬಿ. ಉಷಾರಾಣಿ ಸಲಹೆಯಿತ್ತರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆದ ದಿ.ಸೂದನ ರಾಘವಯ್ಯ ದತ್ತಿನಿಧಿ ಕಾರ್ಯಕ್ರಮದಲ್ಲಿ ಅವರು ದತ್ತಿ ಉಪನ್ಯಾಸ ನೀಡಿ ಮಾತನಾಡಿದರು. ವಿಷಯಾಧರಿತ ಪುಸ್ತಕಗಳನ್ನು ಬೋಧನೆ ಮಾಡುವ, ಸಹನೆಯಿಂದ ಶಿಕ್ಷಣವನ್ನು ಬೋಧಿಸುವ ಶಿಕ್ಷಕರನ್ನು ಗೌರವಿಸಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜವರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಪಯುಕ್ತವಾಗುವ ಉಪನ್ಯಾಸಗಳನ್ನು ನೀಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನುಡಿದರು.
ದತ್ತಿ ದಾನಿಗಳಾದ ನಿವೃತ್ತ ಪ್ರಾಂಶುಪಾಲರು ಎಂ. ಉಷಾ ರವಿ ಅವರು ಪರಿಷತ್ತಿನ ಗೌರವ ಸ್ವೀಕರಿಸಿ ಮಾತನಾಡಿ ಪ್ರತಿ ವರ್ಷ ಕನ್ನಡ ಮಾಧ್ಯಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಯನ್ನು ಗೌರವಿಸು ವುದು ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಸವಾಲು ಕುರಿತು ಉಪನ್ಯಾಸ ನೀಡುವಂತೆ ದತ್ತಿ ನೀಡಲಾಗಿದೆ. ಇದರ ಸದುಪಯೋಗ ವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳ ಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ದತ್ತಿ ಉಪನ್ಯಾಸ ಕಾರ್ಯಕ್ರಮಗಳಿಂದ ದತ್ತಿ ದಾನಿಗಳ ಹೆಸರು ಬದುಕು ಅವರ ಸಾಧನೆಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ ಎಂದರು. ಇದೇ ಸಂದರ್ಭ ೨೦೨೨ -೨೩ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಐಗೂರು ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಿ.ಬಿ. ಬೆಸಿಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನಿರ್ ಅಹ್ಮದ್, ರೇವತಿ ರಮೇಶ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ಲು ನವೀನ್, ಕಾರ್ಯದರ್ಶಿ ರಿಶಿತ್ ಮಾದಯ್ಯ, ರೇಣುಕಾ, ಅಲ್ಲಾರಂಡ ವಿಠಲ್ ನಂಜಪ್ಪ, ಕಾಲೇಜಿನ ಉಪನ್ಯಾಸಕರು, ಪೋಷಕರು ಸೇರಿದಂತೆ ಮತ್ತಿತ ರರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ ಉಪನ್ಯಾಸಕಿ ಡಾ.ಕೋರನ ಸರಸ್ವತಿ ಪ್ರಕಾಶ್ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಚೊಕ್ಕಾಡಿ ಪ್ರೇಮ ರಾಘವಯ್ಯ ವಂದಿಸಿದರು. ಉಪನ್ಯಾಸಕಿ ನಿರ್ಮಲ ಕಾರ್ಯಕ್ರಮ ನಿರೂಪಿಸಿದರು.