ವೀರಾಜಪೇಟೆ, ಮೇ ೫: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಐಕ್ಯೂಎಸಿ ಘಟಕ ಮತ್ತು ಮಹಿಳಾ ಘಟಕದ ಸಹಯೋಗದಲ್ಲಿ ಕಾಲೇಜಿನಲ್ಲಿ ಪಿಸಿಓಡಿ ಮತ್ತು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ಕ್ರೆಡೋ ಮೆಡಿಕಲ್ ಸೆಂಟರ್ನ ವೈದ್ಯ ಡಾ. ಮೇಜರ್ ಅಲ್ಲಂ ಪ್ರಭು ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ನೀಡಿದರು. ಪ್ರಸ್ತುತ ಯುಗದಲ್ಲಿ ಆಹಾರ ಕ್ರಮಗಳು ಬದಲಾಗಿದ್ದು, ನಿಯಮಿತ ಆಹಾರ ಸೇವನೆ, ಯೋಗದಿಂದ ಮತ್ತು ಶುಚಿತ್ವದಿಂದ ಮಾತ್ರ ಆರೋಗ್ಯ ರಕ್ಷಣೆ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಆರೋಗ್ಯದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು. ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ.ಡಿ., ಮಹಿಳಾ ಘಟಕದ ಸಂಚಾಲಕರಾದ ಮುತ್ತಮ್ಮ, ಸುನೀತಾ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.