ಮಡಿಕೇರಿ, ಮೇ ೫: ಕೂರ್ಗ್ ಕ್ರಿಕೆಟ್ ಫೌಂಡೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಲೆದರ್ ಬಾಲ್ "ಕೊಡವ ಕ್ರಿಕೆಟ್ ಪ್ರೀಮಿಯರ್ ಲೀಗ್" ಪಂದ್ಯಾವಳಿಯ ಭಾನುವಾರದ ಮೊದಲ ಪಂದ್ಯದಲ್ಲಿ ವೈಲ್ಡ್ ಫ್ಲವರ್ ತಂಡ ೧೬ ರನ್‌ಗಳ ಅಂತರದಿAದ ಎದುರಾಳಿ ಅಂಜಿಗೇರಿ ನಾಡ್ ತಂಡವನ್ನು ಮಣಿಸಿತು.

ಟಾಸ್ ಗೆದ್ದ ಅಂಜಿಗೇರಿ ನಾಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೈಲ್ಡ್ ಫ್ಲವರ್ ತಂಡ ೨೦ ಓವರ್‌ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೧೪೪ ರನ್ ದಾಖಲಿಸಿತು.

ನಂತರ ಬ್ಯಾಟಿಂಗ್ ಮಾಡಿದ ಅಂಜಿಗೇರಿ ನಾಡ್ ತಂಡ ೧೮.೪ ಓವರ್ ಗಳಲ್ಲಿ ೧೨೮ ರನ್ ಗಳನ್ನಷ್ಟೇ ಗಳಿಸಿತು.

೨೧ ರನ್ ಗಳಿಸಿ, ೩ ವಿಕೆಟ್ ಕಬಳಿಸಿದ ವೈಲ್ಡ್ ಫ್ಲವರ್ ತಂಡದ ನಿತಿನ್ ಬೋಪಣ್ಣ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಗಳಿಸಿದರು.

ಎರಡನೇ ಪಂದ್ಯದಲ್ಲಿ ಕೂರ್ಗ್ ಯುನೈಟೆಡ್ ತಂಡಕ್ಕೆ ಪ್ರಗತಿ ಕ್ರಿಕೆಟರ್ಸ್ ತಂಡದ ವಿರುದ್ಧ ೬ ವಿಕೆಟ್‌ಗಳ ಜಯ ಲಭಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರಗತಿ ಕ್ರಿಕೆಟರ್ಸ್ ತಂಡ ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೪೯ ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಯುನೈಟೆಡ್ ತಂಡ ೧೪.೫ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೧೫೦ ರನ್ ಗಳಿಸಿ ವಿಜಯ ದಾಖಲಿಸಿತು

೫೦ ಬಾಲ್‌ಗಳಲ್ಲಿ ಭರ್ಜರಿ ೯೦ ರನ್ ಗಳಿಸಿದ ಸಿ.ಆರ್. ಅಯ್ಯಪ್ಪ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.