ವೀರಾಜಪೇಟೆ, ಮೇ ೫: ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ಚಾಲಕ ಹಾಗೂ ಕ್ಲೀನರ್ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಐವರ ವಿರುದ್ಧ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಕಣ್ಣೂರಿನ ತೆಕುಮಚ್ಚೇರಿಯ ಚಾಲಕ ಟಿ.ಎಂ. ರಫಿ, ಅಸ್ಸಾಂ ಮೂಲದ ನಿವಾಸಿ, ಲಾರಿ ಕ್ಲೀನರ್ ಕಿತೋರಾಂ ಬರ್ಮನ್ ನೀಡಿದ ದೂರಿನ ಅನ್ವಯ ಬಿಟ್ಟಂಗಾಲದ ರಾಬಿನ್, ಕುಪ್ಪಂಡ ದೀಪು, ಪ್ರೀತಂ, ಹರೀಶ್ ಚಂಗಪ್ಪ, ಚುಮ್ಮ ರಾಕೇಶ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ತಾ. ೨ ರಂದು ಕೇರಳದ ಪೇರಟ್ಟ ಗ್ರಾಮದ ಮ್ಯಾಥ್ಯು ಎಂಬವರಿಗೆ ಸೇರಿದ ಲಾರಿಯಲ್ಲಿ ಇರಿಟಿಯಿಂದ ಚೆತ್ತುಕಲ್ಲನ್ನು ಗೋಣಿಕೊಪ್ಪಕ್ಕೆ ಸಾಗಾಟ ಮಾಡಿ ಕೇರಳಕ್ಕೆ ರಾತ್ರಿ ೮.೩೦ಕ್ಕೆ ಹಿಂದಿರುಗುವ ಸಂದರ್ಭ ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ಜಂಕ್ಷನ್‌ನಲ್ಲಿ ಬಂದ ಕಾರೊಂದು (ಕೆಎ-೧೨-ಎಂ.ಬಿ-೨೫೬೦) ಲಾರಿಯನ್ನು ಅಡ್ಡಗಟ್ಟಿ ಅದರಿಂದ ಕೆಳಗಿಳಿದ ಐವರು ಆರೋಪಿಗಳು ‘ಕೇರಳದಿಂದ ಚೆತ್ತಕಲ್ಲನ್ನು ತೆಗೆದುಕೊಂಡು ಬರುವುದು ಬೇಡ ಎಂದು ನಿಮಗೆ ಹಲವಾರು ಬಾರಿ ಹೇಳಿದರೂ ನೀವು ಯಾಕೆ ಬರುತ್ತಿದ್ದೀರಿ?’ ಎಂದು ಹೇಳಿ ಇಬ್ಬರಿಗೂ ಹಲ್ಲೆ ನಡೆಸಿ. ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಕೊಲೆ ಬೆದರಿಕೆಯೊಡ್ಡಿದ್ದಾರೆ. ನಂತರ ‘ರೂ. ೫ ಲಕ್ಷ ಹಣ ನೀಡಿದ ನಂತರ ಕಲ್ಲನ್ನು ತಂದರೆ ಸಾಕು, ಇಲ್ಲದಿದ್ದರೆ ನಿಮ್ಮನ್ನು ಗುಂಡು ಹೊಡೆದು ಕೊಲೆ ಮಾಡುತ್ತೇವೆ’ ಎಂದು ಬೆದರಿಕೆಯೊಡ್ಡಿರುವುದಾಗಿ ದೂರಿನಲ್ಲಿ ದೂರುದಾರರು ಆರೋಪಿಸಿದರು.

‘ನಂತರ ಇಲ್ಲಿಂದ ಹೊರಟು ಹೋಗಿ’ ಎಂದು ಆರೋಪಿಗಳು ಹೇಳಿ ನಾಳೆ ಬರುವಾಗ ಹಣ ತರ ಬೇಕೆಂಬುದೂ

(ಮೊದಲ ಪುಟದಿಂದ) ತಾಕೀತು ಮಾಡಿದ್ದಾರೆ. ಘಟನೆಯಿಂದ ಹೆದರಿ ಇರಿಟಿ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಇಬ್ಬರು ತಾ. ೩ ರಂದು ದೂರು ನೀಡಿದ್ದಾರೆ. ಆರೋಪಿಗಳು ಈ ಹಿಂದೆಯೂ ಇದೇ ಚಾಲಕ ಓಡಿಸಿಕೊಂಡು ಬರುತ್ತಿದ್ದ ಲಾರಿಯನ್ನು ತಡೆದು ಹಣಕ್ಕೆ ಬೇಡಿಕೆಯೊಡ್ಡಿ ಗಲಾಟೆ ಮಾಡಿದ್ದರು. ಇದರಿಂದ ಆರೋಪಿಗಳ ಮುಖಪರಿಚಯವಿದೆ. ಹಿಂದೆ ನಡೆದ ಗಲಾಟೆ ವಿಚಾರದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು ಎಂದು ಚಾಲಕ ರಫಿ ತಿಳಿಸಿದ್ದಾರೆ.

ಐಪಿಸಿ ೧೮೬೦, ಸೆಕ್ಷನ್ ೧೪೩, ೩೪೧, ೩೨೩, ೩೮೪, ೫೦೪, ೫೦೬, ೧೪೯ ಅಡಿ ಪ್ರಕರಣ ದಾಖಲಾಗಿದೆ. - ಕಿಶೋರ್ ಶೆಟ್ಟಿ