ಮಡಿಕೇರಿ, ಮೇ ೬ : ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವಕೋಲ ಪ್ರಯುಕ್ತ ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ನಿನ್ನೆ ದಿನ ಸಂಜೆ ೬ ಗಂಟೆಗೆ ಆಚಾರ್ಯ ವರಣಂ, ಪುಣ್ಯಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ಹಾಗೂ ಪ್ರಸಾದ ವಿತರಣೆ ನಡೆಯಿತು.

ಇಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಲಶಪೂಜೆ, ನವಕ ಪಂಚಗವ್ಯ ಕಲಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಶ್ರೀ ಪಾಷಾಣಮೂರ್ತಿ ದೈವದ ಕಲಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನೆರವೇರಿತು.

ನಾಗ ಪ್ರತಿಷ್ಠಾಪನಾ ವಾರ್ಷಿ ಕೋತ್ಸವ ಹಾಗೂ ನಾಗದರ್ಶನದ ಪ್ರಯುಕ್ತ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕದೊಂದಿಗೆ ನಾಗದರ್ಶನ, ಮಹಾ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಉಡುಪಿಯ ಪೆರ್ಲಂಪಾಡಿ ರಮಾನಂದಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಟ್ಟರು. ಬಳಿಕ ಶ್ರೀ ಪಾಷಾಣಮೂರ್ತಿ ದೈವ ಕೋಲ ನಡೆಯಿತು.