ಮಡಿಕೇರಿ, ಮೇ ೫: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಹಲವಷ್ಟು ದೂರುಗಳು ಪ್ರವಾಸಿಗರು ಹಾಗೂ ಸಾರ್ವಜನಿಕರಿಂದ ಕೇಳಿಬರುತ್ತಲೇ ಇರುತ್ತವೆ. ಅದೇ ರೀತಿ ಶತ-ಶತÀಮಾನಗಳ ಐತಿಹ್ಯ ಹೊಂದಿರುವ ಪುರಾತನ ಹಿನ್ನೆಲೆಯನ್ನು ಬಿಂಬಿಸುವ ಮಡಿಕೇರಿ ನಗರದ ಗದ್ದುಗೆಯೂ ಈ ಪರಿಸ್ಥಿತಿಯಿಂದ ಹೊರತಾಗಿಲ್ಲ. ‘ರಾಜಕಳೆ’ಯಲ್ಲಿರಬೇಕಾದ ಈ ತಾಣ ‘ಜೀವಕಳೆ’ಯನ್ನೂ ಕಳೆದುಕೊಂಡು ಪಾಳು ಬಿದ್ದ ಸ್ಥಿತಿಯಲ್ಲಿದೆ. ಉದ್ಯಾನವನವಂತೂ ನಿರ್ವಹಣೆ ಇಲ್ಲದೆ ಸೊರಗಿಹೋಗಿದೆ.

ಮಡಿಕೇರಿ ನಗರದ ಮಹದೇವಪೇಟೆಯಲ್ಲಿರುವ ಈ ತಾಣ ಹಾಲೇರಿ ರಾಜವಂಶದ ಕುರುಹು ಕೂಡ ಆಗಿದೆ. ಇದರ ಸುತ್ತಮುತ್ತ ವ್ಯಾಪ್ತಿ ಒತ್ತುವರಿ ವಿಚಾರ ಆಗಾಗ್ಗೆ ಸುದ್ದಿ ಮಾಡುತ್ತಿರುತ್ತದೆ. ಆದರೆ, ಗದ್ದುಗೆ ಎಂಬ ಸುಂದರ ತಾಣ ಮಾತ್ರ ಅಂದ ಕಳೆದುಕೊಂಡು ಬಣಗುಡುತ್ತಿದೆ. ಬಾಡಿದ ಗಿಡಗಳು, ಬಣ್ಣ ಕಾಣದ ಗದ್ದುಗೆ ಕಟ್ಟಡ, ತುಕ್ಕು ಹಿಡಿದಿರುವ ಮಕ್ಕಳ ಆಟದ ಪರಿಕರಗಳಿಂದ ಸಾರ್ವಜನಿಕರು ಆಗಮಿಸಿ ಅತೃಪ್ತಿಯಿಂದ ಹೊರನಡೆಯುವಂತಹ ಸ್ಥಿತಿಗೆ ಈ ಜಾಗ ತಲುಪಿದೆ.

ಸೊರಗಿದ ಸ್ಥಿತಿಯಲ್ಲಿ ಉದ್ಯಾನ

ಗದ್ದುಗೆ ಪ್ರಾಚ್ಯವಸ್ತು ಇಲಾಖೆ ಸುಪರ್ದಿಯಲ್ಲಿದ್ದು, ಅದರ ಆವರಣದಲ್ಲಿರುವ ಉದ್ಯಾನವನ ತೋಟಗಾರಿಕೆ ಇಲಾಖೆ ನಿರ್ವಹಣೆಯಲ್ಲಿದೆ. ಜಾಗ ಪುರಾತತ್ವ ಇಲಾಖೆಯದ್ದಾದರೂ, ೧೪-೦೮-೨೦೧೧ರಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗದ್ದುಗೆ ವ್ಯಾಪ್ತಿಯ ಜಮೀನಿನಲ್ಲಿ ಉದ್ಯಾನ ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸವನ್ನು ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಜಿಲ್ ಕೃಷ್ಣ ನೆರವೇರಿಸಿದ್ದರು. ೧-೩-೨೦೧೩ರಲ್ಲಿ ಉದ್ಯಾನ ವನವನ್ನು ಅಂದಿನ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಉದ್ಘಾಟಿಸಿದ್ದರು.

ಇದೀಗ ಗದ್ದುಗೆ ಪ್ರವೇಶಕ್ಕೆ ತೋಟಗಾರಿಕೆ ಇಲಾಖೆ ೮ ವರ್ಷ ಮೇಲ್ಪಟ್ಟವರಿಗೆ ರೂ. ೧೦ ಪ್ರವೇಶ ಶುಲ್ಕ ಪಡೆಯುತ್ತದೆ. ಆದರೆ, ಉದ್ಯಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಬೇಸಿಗೆ ಹಿನ್ನೆಲೆ ಅಂತರ್ಜಲ ಕುಸಿದ ಕಾರಣ ನೀರಿನ ಕೊರತೆಯಿಂದ ಗಿಡಗಳು ಬಾಡಿ ಸೊರಗಿ ಹೋಗಿವೆ. ಸ್ವಚ್ಛಂದ ವಾತಾವರಣ ಸೃಷ್ಟಿಸಲು ಇಲಾಖೆ ವಿಫಲಗೊಂಡಿದೆ. ಕುಡಿಯುವ ನೀರು, ಶೌಚಾಲಯದಂತಹ ಕನಿಷ್ಟ ಸೌಲಭ್ಯ ಒದಗಿಸುವ ಗೋಜಿಗೂ ತೋಟಗಾರಿಕೆ ಇಲಾಖೆ ಪ್ರಯತ್ನಿಸದಿರುವುದು ಅತೃಪ್ತಿಗೆ ಕಾರಣವಾಗಿದೆ.

ತುಕ್ಕು ಹಿಡಿದಿವೆ ಆಟದ ಪರಿಕರಗಳು

ವಾಯುವಿಹಾರಕ್ಕೆ ಸೂಕ್ತ ಜಾಗವಾಗಿರುವ ಗದ್ದುಗೆ ಸದ್ಯ ನಿರ್ವಹಣೆ ಇಲ್ಲದೆ ಆಗಮಿಸಲು ಹಿಂದೇಟು ಹಾಕುವ ಪರಿಸ್ಥಿತಿಗೆ ತಲುಪಿದೆ. ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರು ವಾಕಿಂಗ್ ಮಾಡಲು ಇಲ್ಲಿಗೆ ಹೆಚ್ಚಾಗಿ ಬರುತ್ತಾರೆ. ಮಕ್ಕಳಿಗಾಗಿ ಅಳವಡಿಸಿರುವ ಆಟಿಕೆ ಪರಿಕರಗಳು ಕೆಲವು ಮುರಿದು ಬಿದ್ದಿದ್ದರೆ, ಮತ್ತೆ ಕೆಲವು ತುಕ್ಕು ಹಿಡಿದು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ. ಮಕ್ಕಳು ಆಟವಾಡುವ ಸಮಯದಲ್ಲಿ ಗಾಯಗೊಳ್ಳುವ ಭಯವೂ ಮೂಡುತ್ತದೆ.

ತುಕ್ಕು ಹಿಡಿದ ಕಬ್ಬಿಣದ ಪರಿಕರಗಳು ಜೋಡಣೆಯಿಂದ ಹೊರಬಂದು ಚೂಪಾಗಿ ಪರಿವರ್ತನೆಗೊಂಡಿವೆ. ಇದರಿಂದ ಮಕ್ಕಳ ದೇಹಕ್ಕೆ ಗಾಯವಾಗುವ ಭಯ ಪೋಷಕರಲ್ಲಿ ಮೂಡುತ್ತದೆ. ಉಯ್ಯಾಲೆಯೊಂದು ತುಂಡಾಗಿ ಬಿದ್ದಿದ್ದರೆ, ಮತ್ತೊಂದು ಪರಿಕರದ ಒಂದು ಭಾಗವೇ ಇಲ್ಲದಂತಾಗಿದೆ. (ಮೊದಲ ಪುಟದಿಂದ) ಮಡಿಕೇರಿ ನಗರದಲ್ಲಿ ಪಾರ್ಕ್ ಕೊರತೆ ದೂರಿನ ನಡುವೆ ಇರುವ ಪಾರ್ಕ್ನ ನಿರ್ವಹಣೆಯ ಸ್ಥಿತಿ ಕಂಡು ಜನ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಅಂದ ಕಳೆದುಕೊಂಡ ಗದ್ದ್ದುಗೆ

ಹಾಲೇರಿ ರಾಜವಂಶದ ಈ ಗದ್ದುಗೆ ಪಾಚಿ ಕಟ್ಟಿ ಅಂದ ಕಳೆದುಕೊಂಡಿದೆ. ಸುಣ್ಣ-ಬಣ್ಣ ಕಾಣದೆ ಅದೆಷ್ಟೋ ವರ್ಷ ಸವಿಸಿರುವ ಈ ಜಾಗವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖಗೊಳ್ಳಬೇಕಾಗಿದೆ.

ಪುರಾತತ್ವ ಇಲಾಖೆಯ ಕ್ಯುರೇಟರ್ ರೇಖಾ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ, ಈ ಸಂಬAಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಣ್ಣ ಬಳಿಯುವ, ನೀರು ಒದಗಿಸುವ ಸೇರಿದಂತೆ ಇನ್ನಿತರ ಅಂಶಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಗದ್ದುಗೆ ಪಾಚಿಕಟ್ಟಿ ಗೋಡೆಗಳೆಲ್ಲ ಹಾಳಾಗಿವೆ. ಆಗಮಿಸುವ ಪ್ರವಾಸಿಗರು ಸೂಕ್ತ ಸೌಲಭ್ಯವಿಲ್ಲದ ಬಗ್ಗೆ ಸಿಬ್ಬಂದಿ ಎದುರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಉದಾಹರಣೆಗಳು ಕೂಡ ಇವೆ. ಇತ್ತೀಚಿಗೆ ಉತ್ತರ ಭಾರತದಿಂದ ಬಂದ ನ್ಯಾಯಾಧೀಶರೊಬ್ಬರು ಇಲ್ಲಿನ ಸ್ಥಿತಿ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಘಟನೆಯೂ ನಡೆದಿತ್ತು.

- ಹೆಚ್.ಜೆ. ರಾಕೇಶ್