ಸೋಮವಾರಪೇಟೆ, ಮೇ ೫: ಟಿಂಬರ್ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರ ಬಿದ್ದು, ಕಾರ್ಮಿಕರೋರ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಘಟನೆ ಪಟ್ಟಣ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಂಬ್ತಳ್ಳಿ ನಿವಾಸಿ ಮಿತ್ರೇಶ್ (೪೨) ಮೃತ ದುರ್ದೈವಿ. ಹಾನಗಲ್ಲು ಗ್ರಾಮದಲ್ಲಿರುವ ಚಂಗಪ್ಪ ಎಂಬವರ ಕಾಫಿ ತೋಟದಲ್ಲಿ ಇಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ದುರ್ಘಟನೆ ನಡೆದಿದೆ.

ಚಂಗಪ್ಪ ಅವರು ತಮ್ಮ ತೋಟದಲ್ಲಿದ್ದ ಸಿಲ್ವರ್ ಮರಗಳನ್ನು ಜಮಾಲ್ ಮತ್ತು ಕವನ್ ಅವರುಗಳಿಗೆ ಮಾರಾಟ ಮಾಡಿದ್ದು, ಅದರಂತೆ ಟಿಂಬರ್ ಕೆಲಸಕ್ಕೆ ಮಿತ್ರೇಶ್ ತೆರಳಿದ್ದರು. ಕಳೆದ ಒಂದು ವಾರದಿಂದ ಅನಾರೋಗ್ಯದ ಕಾರಣಕ್ಕಾಗಿ ಮನೆಯಲ್ಲಿಯೇ ಇದ್ದ ಮಿತ್ರೇಶ್ ಅವರು, ಇಂದು ಸ್ಥಳೀಯ ಕಾರ್ಮಿಕರೊಂದಿಗೆ ಕೆಲಸಕ್ಕೆ ತೆರಳಿದ್ದರು.

ಸಿಲ್ವರ್ ಮರಗಳನ್ನು ಬೀಳಿಸುವಾಗ ಕಾಫಿ ಗಿಡಗಳಿಗೆ ಹಾನಿಯಾಗದಂತೆ ಅಕ್ಕಪಕ್ಕದ ಮರಗಳಿಗೆ ಹಗ್ಗವನ್ನು ಕಟ್ಟಿ, ನಂತರ ಮರವನ್ನು ಕಡಿಯಲಾಗುತ್ತಿತ್ತು. ಈ ಸಂದರ್ಭ ಬುಡ ಕಟಾವು ಮಾಡಿದ ಮರ ಆಕಸ್ಮಿಕವಾಗಿ ಪಕ್ಕದ ಮರದ ಮೇಲೆ ಬಿದ್ದಿದೆ. ಪರಿಣಾಮ ಬುಡ ಸಹಿತ ಮತ್ತೊಂದು ಮರ ಕೆಳಭಾಗದಲ್ಲಿದ್ದ ಮಿತ್ರೇಶ್ ಅವರ ಮೇಲೆ ಬಿದ್ದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಮಿತ್ರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.