ಗೋಣಿಕೊಪ್ಪಲು, ಮೇ ೬: ೫ ದಿನಗಳ ಕಾಲ ನಡೆದ ಯರವ ಸಮಾಜದ ೧೨ನೇ ವರ್ಷದ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್‌ಗೆ ವರ್ಣರಂಜಿತ ತೆರೆ ಎಳೆಯಲಾಯಿತು. ತಿತಿಮತಿ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ೬೫ ಯರವ ಸಮುದಾಯದ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಅಂತಿಮ ಪಂದ್ಯದಲ್ಲಿ ಕುಟ್ಟ ಭಾಗದ ಕೆವೈಸಿ ತಂಡವು ನಾಣಚ್ಚಿ ಭಾಗದ ರೈಸಿಂಗ್ ಸ್ಟಾರ್ ತಂಡವನ್ನು ಮಣಿಸುವ ಮೂಲಕ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್‌ನ್ನು ಮುಡಿಗೇರಿಸಿಕೊಂಡಿತು. ನಾಣಚ್ಚಿ ಭಾಗದ ರೈಸಿಂಗ್ ಸ್ಟಾರ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.

ನಾಣಚ್ಚಿ ರೈಸಿಂಗ್ ಸ್ಟಾರ್ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ನಿಗದಿತ ಓವರ್‌ನಲ್ಲಿ ಕೇವಲ ೩೦ ರನ್‌ಗಳನ್ನು ಬಾರಿಸಿತು. ನಂತರ ಮೈದಾನಕ್ಕಿಳಿದ ಕುಟ್ಟ ಕೆವೈಸಿ ತಂಡವು ಕೆಲವು ಓವರ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ಮುಟ್ಟುವ ಮೂಲಕ ಯರವ ತಿರುಮುಂಡೆಲಾತ್ತಿಲಾ ಕ್ರಿಕೆಟ್ ಕಪ್‌ನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡಕ್ಕೆ ೩೦ ಸಾವಿರ, ರನ್ನರ್ ಅಪ್ ತಂಡಕ್ಕೆ ೧೫ ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು.

ಕ್ರೀಡೋತ್ಸವದ ಅಂಗವಾಗಿ ಮಹಿಳೆಯರಿಗೆ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಚೆನ್ನಂಗಿಯ ಈಶ್ವರಿ ತಂಡವು ದೇವರಪುರದ ಕವಿತ ತಂಡವನ್ನು ಸೋಲಿಸುವ ಮೂಲಕ ಈ ಬಾರಿಯ ಮಹಿಳೆಯರ ಹಗ್ಗ ಜಗ್ಗಾಟದ ಪ್ರಶಸ್ತಿಯನ್ನು ಪಡೆಯಿತು. ಕಾರ್ಯಕ್ರಮದ ಅಂಗವಾಗಿ ಸಮಾಜ ಬಾಂಧವರಿಗೆ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

(ಮೊದಲ ಪುಟದಿಂದ) ಅಂತಿಮ ಪಂದ್ಯಾಟವನ್ನು ಉದ್ಘಾಟಿಸಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಚೀಫ್ ಎಲೆಕ್ಟಿçಕಲ್ ಇನ್ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಯರವ ಸಮುದಾಯವು ಕೊಡಗಿನಲ್ಲಿ ತನ್ನದೆ ಆದ ಕಲೆ ಸಂಸ್ಕೃತಿಯನ್ನು ಹೊಂದಿರುವ ಸಮುದಾಯವಾಗಿದೆ.

ಯರವ ಸಮುದಾಯದ ಯುವಕ, ಯುವತಿಯರು ವಿದ್ಯಾಭ್ಯಾಸದೊಂದಿಗೆ ಇತರ ತಾಂತ್ರಿಕತೆಯ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಉದ್ಯೋಗ ಪಡೆಯಲು ಅವಕಾಶವಾಗುತ್ತದೆ ಎಂದರು.

ಪೊನ್ನAಪೇಟೆ ತಾಲೂಕಿನಲ್ಲಿ ಪಿಯುಸಿ ನಂತರದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ವಸತಿ ನಿಲಯವನ್ನು ಸರ್ಕಾರ ಪ್ರಾರಂಭಿಸಬೇಕು. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಯರವ ಸಮಾಜ ಅಧ್ಯಕ್ಷ ಪಿ.ಕೆ. ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿ, ಮುಂದಿನ ಸಾಲಿನಿಂದ ಸರ್ಕಾರ ಯರವ ಸಮುದಾಯದ ಕ್ರೀಡೋತ್ಸವಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಸಮುದಾಯ ಬಾಂಧವರು ಒಗ್ಗಟ್ಟನ್ನು ಕಾಪಾಡುವ ಮೂಲಕ ತಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಮುಂದೆ ಸಾಗಬೇಕೆಂದರು.

ನಿವೃತ್ತ ಮುಖ್ಯ ಶಿಕ್ಷಕ ಚೆರಿಯಪಂಡ ರುಕ್ಮಿಣಿ ನಾಣಯ್ಯ ಮಾತನಾಡಿ ಗಿರಿಜನ ಸಮುದಾಯದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಪ್ರತಿಭೆಗಳು ಅಡಗಿರುತ್ತದೆ. ಇವುಗಳಿಗೆ ಸೂಕ್ತ ವೇದಿಕೆ ಲಭ್ಯವಾಗಬೇಕು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದರು.

ಗೋಣಿಕೊಪ್ಪಲುವಿನ ಸಮಾಜ ಸೇವಕಿ ಕೊಟ್ಟಂಗಡ ವಿಜು ದೇವಯ್ಯ ಮಾತನಾಡಿ ಯರವ ಸಮುದಾಯವು ತಮ್ಮ ಮಾತೃಭಾಷೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ತಮ್ಮ ಭಾಷೆಯ ಮೇಲೆ ಕೀಳರಿಮೆ ಸಲ್ಲದು, ಕ್ರೀಡಾಕೂಟಗಳಲ್ಲಿ ಹಾಗೂ ಇತರ ಕಾರ್ಯಕ್ರಮದಲ್ಲಿ ಯರವ ಭಾಷೆಯನ್ನು ಹೆಚ್ಚಾಗಿ ಬಳಸುವಂತಾಗಬೇಕು ಎಂದು ಹೇಳಿದರು.

ಅತಿಥಿಗಳಾಗಿ ಭಾಗವಹಿಸಿದ್ದ ತಿತಿಮತಿ ಗಿರಿಜನ ವಿವಿಧ್ದೊದ್ದೇಶ ಸಹಕಾರ ಸಂಘದ ಅಧ್ಯಕ್ಷ ಮಣಿಕುಂಞ, ಗ್ರಾಮ ಪಂಚಾಯಿತಿ ಸದಸ್ಯ ಚುಬ್ರು ಸೇರಿದಂತೆ ಇನ್ನಿತರ ಪ್ರಮುಖರು ಮಾತನಾಡಿದರು. ವೇದಿಕೆಯಲ್ಲಿ ಪಿಡಡ್ಲೂö್ಯಡಿ ಗುತ್ತಿಗೆದಾರ ನಾಮೇರ ನವೀನ್, ಮಾಜಿ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರಾದ ವೈ.ಎಂ. ಪ್ರಕಾಶ್, ದೇವರಪುರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಣಿ, ತಿತಿಮತಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾದ ಪುಷ್ಪ, ಸದಸ್ಯರಾದ ಮಲ್ಲಪ್ಪ, ಸೇರಿದಂತೆ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಾಟೂ ಮೊಣ್ಣಪ್ಪ, ಮುಂತಾದವರು ಭಾಗವಹಿಸಿದ್ದರು. ಸಮಾಜದ ಗೌರವ ಅಧ್ಯಕ್ಷ ರವಿ ಪ್ರಾರ್ಥಿಸಿ, ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ರೂಪೇಶ್ ಹಾಗೂ ಪ್ರತಿಮಾ ನಿರೂಪಿಸಿ ವಂದಿಸಿದರು. ಕ್ರೀಡೋತ್ಸವದ ಅಂಗವಾಗಿ ಕೊಡವ ವಾಲಗತ್ತಾಟ್ ನಡೆಯಿತು. ಮುಖ್ಯ ಅತಿಥಿಗಳನ್ನು ಯರವ ಸಾಂಪ್ರದಾಯಿಕ ದುಡಿಕೊಟ್ಟಿನೊಂದಿಗೆ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

-ಹೆಚ್.ಕೆ.ಜಗದೀಶ್