ಮಡಿಕೇರಿ, ಮೇ ೫: ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ನೈರುತ್ಯ ಪದವೀಧರರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಭಾರತ ಚುನಾವಣಾ ಆಯೋಗವು ತಾ. ೨ ರಂದು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿರುತ್ತದೆ. ಅದರಂತೆ ಮತದಾನ ಪ್ರಕ್ರಿಯೆಯು ಜೂನ್ ೩ ರಂದು ಹಾಗೂ ಮತ ಎಣಿಕೆ ಕಾರ್ಯವು ಜೂನ್ ೬ ರಂದು ನಡೆಯಲಿದೆ.

ಈ ಮೂರು ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಈಗಾಗಲೇ ೨೦೨೩ರ ಡಿಸೆಂಬರ್ ೩೦ ರಂದು ಪ್ರಕಟಿಸಲಾಗಿದ್ದು, ಈವರೆಗೆ ಮತದಾರರ ಪಟ್ಟಿಗಳಿಗೆ ನೋಂದಾಯಿಸಿರುವ ಮತದಾರರ ಸಂಖ್ಯಾ ವಿವರಗಳು ಇಂತಿವೆ.

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ ವ್ಯಾಪ್ತಿಯಲ್ಲಿ ಒಟ್ಟು ೧೮,೩೭೯ ಮಂದಿ ನೋಂದಾಯಿಸಿಕೊAಡಿದ್ದಾರೆ. ಅದರಲ್ಲಿ ೧೦,೩೫೫ ಪುರುಷರು ಮತ್ತು ೮,೦೨೨ ಮಹಿಳೆಯರು ಹಾಗೂ ೨ ಇತರೆ ಮತದಾರರು ಇದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ‘ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ’ದಲ್ಲಿ ಒಟ್ಟು ೧೯,೩೮೦ ಮಂದಿ ಮತದಾರರು ನೋಂದಾಯಿಸಿದ್ದಾರೆ. ಅದರಲ್ಲಿ ೮,೯೪೩ ಪುರುಷರು ಮತ್ತು ೧೦೪೩೭ ಮಹಿಳಾ ಮತದಾರರು ಇದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ‘ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ’ದಲ್ಲಿ ಒಟ್ಟು ೭೪,೨೧೮ ಮಂದಿ ಮತದಾರರು ನೋಂದಾಯಿಸಿದ್ದಾರೆ. ಅದರಲ್ಲಿ ೩೮,೦೫೧ ಪುರುಷರು ಮತ್ತು ೩೬,೧೬೨ ಮಹಿಳಾ ಮತದಾರರು ಹಾಗೂ ೫ ಇತರೆ ಮತದಾರರು ಇದ್ದಾರೆ.

ಈವರೆಗೂ ನೋಂದಾಯಿಸದೇ ಇರುವ ಅರ್ಹ ಮತದಾರರಿಂದ ನಿಗದಿತ ನಮೂನೆಗಳಲ್ಲಿ ಅರ್ಜಿ ಸಲ್ಲಿಸಲು ಅಂತಿಮ ಅವಕಾಶವನ್ನು ಕಲ್ಪಿಸಲಾಗಿದ್ದು, ಸೇರ್ಪಡೆ ಅರ್ಜಿಗಳನ್ನು ಮೇ ೬ ರ ಸಂಜೆ ೫ ಗಂಟೆಯೊಳಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ, ತಹಶೀಲ್ದಾರ್ ಕಚೇರಿಗಳಲ್ಲಿ, ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಲ್ಲಿಸಬಹುದು. ಆದ್ದರಿಂದ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಎಲ್ಲಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿ ಆಗಿರುವ ಮೈಸೂರು ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ಕೋರಿದ್ದಾರೆ.